Header Ads
Header Ads
Breaking News

ಪುತ್ತೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ:ಅಧ್ಯಕ್ಷರಾಗಿ ದಿನೇಶ್ ಮೆದು, ಉಪಾಧ್ಯಕ್ಷರಾಗಿ ಮಂಜುನಾಥ ಆಯ್ಕೆ

ಪುತ್ತೂರು: ಪುತ್ತೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ತಾಪಂ ಉಪಾಧ್ಯಕ್ಷ, ಬಿಜೆಪಿ ಮುಖಂಡ ದಿನೇಶ್ ಮೆದು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನ್ಯಾಯವಾದಿ ಮಂಜುನಾಥ ಎನ್.ಎಸ್. ಆಯ್ಕೆಯಾಗಿದ್ದಾರೆ.

ಮುಂದಿನ 20 ತಿಂಗಳ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗಾಗಿ ಮಂಗಳವಾರ ಎಪಿಎಂಸಿ ಸಭಾಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ತಹಸೀಲ್ದಾರ್ ಡಾ. ಪ್ರದೀಪ್ ಕುಮಾರ್ ಚುನಾವಣೆ ನಡೆಸಿಕೊಟ್ಟರು. ಎಪಿಎಂಸಿಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಕಡೆಯಿಂದ ಅಧ್ಯಕ್ಷ, ಉಪಾಧ್ಯಕ್ಷತೆಗೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯನ್ನು ತಹಸೀಲ್ದಾರ್ ಘೋಷಿಸಿದರು.
ಅಧ್ಯಕ್ಷ ಸ್ಥಾನವನ್ನು ಬಿಜೆಪಿಯು ಸುಳ್ಯ ಮಂಡಲ ವ್ಯಾಪ್ತಿಗೂ, ಉಪಾಧ್ಯಕ್ಷತೆಯನ್ನು ಪುತ್ತೂರು ಮಂಡಲ ವ್ಯಾಪ್ತಿಗೂ ವಿಂಗಡಣೆ ಮಾಡಿದ ಬಳಿಕ ಈ ಆಯ್ಕೆ ನಡೆಯಿತು. ಸುಳ್ಯ ಮಂಡಲ ಬಿಜೆಪಿಯು ತನ್ನ ಕಡೆಯಿಂದ ಅಧ್ಯಕ್ಷ ಸ್ಥಾನಕ್ಕೆ ಸವಣೂರಿನ ದಿನೇಶ್ ಮೆದು ಅವರನ್ನು ಶಿಫಾರಸು ಮಾಡಿದ್ದರೆ, ಪುತ್ತೂರು ಮಂಡಲವು ಉಪಾಧ್ಯಕ್ಷತೆಗೆ ಮಂಜುನಾಥ್ ಹೆಸರು ಶಿಫಾರಸು ಮಾಡಿತ್ತು. ಕಳೆದ ಬಾರಿ ಅಧ್ಯಕ್ಷತೆಯು ಪುತ್ತೂರು ಮಂಡಲಕ್ಕೆ, ಉಪಾಧ್ಯಕ್ಷತೆ ಸುಳ್ಯ ಮಂಡಲಕ್ಕೆ ವಿಂಗಡಣೆಯಾಗಿತ್ತು.
ಕಳೆದ 20 ತಿಂಗಳಲ್ಲಿ ನಮ್ಮ ಆಡಳಿತ ಕೈಗೊಂಡ ಎಲ್ಲ ಉತ್ತಮ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದು ನೂತನ ಅಧ್ಯಕ್ಷ ದಿನೇಶ್ ಮೆದು ಹೇಳಿದರು. ಅಧ್ಯಕ್ಷರಾದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಅಧ್ಯಕ್ಷರು ತಯಾರಿಸಿದ 4.5 ಕೋಟಿ ರೂ.ಗಳ ಕ್ರಿಯಾಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಯಾರ್ಡ್‌ಗೆ 10 ಎಕರೆ ಜಾಗ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ಅದನ್ನು ಪೂರ್ಣಗೊಳಿಸಲಾಗುವುದು. ಸಾಲ್ಮರ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣಕ್ಕೆ ಎಪಿಎಂಸಿ ಕಡೆಯಿಂದ ಕೊಡಬೇಕಾದ ಮೊತ್ತವನ್ನು ಕೊಡಲು ಬದ್ಧರಿದ್ದೇವೆ. ಈ ಬಗ್ಗೆ ರೈಲ್ವೆಗೆ ಪತ್ರ ಬರೆಯಲಾಗಿದೆ. ಮುಂದಿನ ಪ್ರಕ್ರಿಯೆ ಸಂಸದರ ನೇತೃತ್ವದಲ್ಲಿ ನಡೆಯಲಿದೆ. ರೈಲ್ವೆಯು ಯೋಜನೆ ಆರಂಭಿಸುವಾಗ ನಾವು ಆ ಮೊತ್ತ ನೀಡಲು ಬದ್ಧರಿದ್ದೇವೆ ಎಂದರು.
ಅಭಿನಂದನಾ ಸಭೆಯಲ್ಲಿ ನಿರ್ಗಮನ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಿರ್ಗಮನ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲ್, ನಿರ್ದೇಶಕರಾದ ಪುಲಸ್ತ್ಯಾ ರೈ, ಶಕೂರು ಹಾಜಿ ಅಭಿನಂದಿಸಿ ಮಾತನಾಡಿದರು. ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿದರು. 2017ರ ಏಪ್ರಿಲ್ 25ರಂದು ನಡೆದ ಎಪಿಎಂಸಿ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳ ಪೈಕಿ ಬಿಜೆಪಿ 11 ಮತ್ತು ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿತ್ತು. ಜೂನ್ ೭ರಂದು ನಡೆದ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಯಲ್ಲಿ ಮೊದಲ 20 ತಿಂಗಳಿಗೆ ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ಬಾಲಕೃಷ್ಣ ಬಾಣಜಾಲ್ ಆಯ್ಕೆಯಾಗಿದ್ದರು. ಪ್ರಸ್ತುತ 2ನೇ ಅವಧಿಗೆ ಆಯ್ಕೆ ನಡೆದಿದೆ. 5 ವರ್ಷಗಳ ಆಳ್ವಿಕೆಯಲ್ಲಿ ತಲಾ 20 ತಿಂಗಳುಗಳ ಒಟ್ಟು ೩ ಅವಧಿಗಳಿರುತ್ತವೆ.

ಪುತ್ತೂರು ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ, ತಾಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್, ಸವಣೂರು ಗ್ರಾಪಂ ಅಧ್ಯಕ್ಷೆ ಇಂದಿರಾ ಬಿ.ಕೆ., ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಅಶೋಕ್ ಕುಮಾರ್ ಪುತ್ತಿಲ, ರಾಕೇಶ್ ರೈ ಕೆಡೆಂಜಿ, ಕರುಣಾಕರ ಪೂಜಾರಿ ಪಟ್ಟೆ ಸೇರಿದಂತೆ ಹತ್ತಾರು ಬಿಜೆಪಿ ಮುಖಂಡರು, ಪುತ್ತೂರು ತಾಲೂಕು ಟಿಂಬರ್ ಎಸೋಸಿಯೇಶನ್ ಪದಾಧಿಕಾರಿಗಳು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿದರು. ಎಪಿಎಂಸಿ ನಿರ್ದೇಶಕರಾದ ಬೂಡಿಯಾರ್ ರಾಧಾಕೃಷ್ಣ ರೈ, ಬಾಲಕೃಷ್ಣ ಬಾಣಜಾಲ್, ತ್ರಿವೇಣಿ ಕರುಣಾಕರ ಪೆರ್ವೋಡಿ, ಪುಲಸ್ತ್ಯ ರೈ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಶಕೂರ್ ಹಾಜಿ, ಮೇದಪ್ಪ ಗೌಡ, ಕುಶಾಲಪ್ಪ ಗೌಡ, ಕೊರಗಪ್ಪ, ತೀರ್ಥಾನಂದ ದುಗ್ಗಳ, ಕೃಷ್ಣ ಕುಮಾರ್ ರೈ ಉಪಸ್ಥಿತರಿದ್ದರು.

Related posts

Leave a Reply