Header Ads
Header Ads
Breaking News

ಪುತ್ತೂರು ಜಿಲ್ಲಾ ಕೇಂದ್ರವಾಗಿಸುವ ಹೋರಾಟ

ಪುತ್ತೂರನ್ನು ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಕೇಂದ್ರ ಸಮಿತಿಯನ್ನು ರಚನೆ ಮಾಡಿದ ಬಳಿಕ ತಾಲೂಕು ಸಮಿತಿಯನ್ನು ರಚಿಸಿ ಪ್ರತೀ ತಾಲೂಕಿನ ಐದಾರು ಜನರನ್ನು ಕೇಂದ್ರ ಸಮಿತಿಗೆ ಸೇರಿಸುವ ನಿರ್ಣಯವನ್ನು ಕೈಗೊಂಡದ್ದು ಪುತ್ತೂರು ಜಿಲ್ಲಾ ಹೋರಾಟ ಸಮಿತಿ ಸಭೆಯಲ್ಲಿ.
ಇಲ್ಲಿಯ ಕೋರ್ಟ್‌ಹಾಲ್‌ನ ಪರಾಶರ ಸಭಾಂಗಣದಲ್ಲಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಸಮಿತಿ ಸಂಚಾಲಕ ಅಶೋಕ್ ರೈ ಅವರ ನೇತೃತ್ವದಲ್ಲಿ ನಡೆದ 2ನೇ ಮಹತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಬಂದ ಅಭಿಪ್ರಾಯದಂತೆ ಕೇಂದ್ರ ಸಮಿತಿಗೆ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಗೌರವಾಧ್ಯಕ್ಷರನ್ನಾಗಿ, ಗೌರವ ಸಲಹೆಗಾರರಾಗಿ ಮಠದ ಸ್ವಾಮೀಜಿಗಳನ್ನು ಹಾಗೂ ಸಂಚಾಲಕರನ್ನಾಗಿ ಶಾಸಕರು ಹಾಗೂ ಮಾಜಿ ಶಾಸಕರನ್ನು ನೇಮಿಸಿ ಕೇಂದ್ರ ಸಮಿತಿಯ ನಿರ್ಧಾರದಂತೆ ತಾಲೂಕು ಸಮಿತಿಗಳನ್ನು ರಚಿಸುವುದು. ಬಳಿಕ 10 ಜನರ ಕೋರ್ ಕಮಿಟಿಯನ್ನು ರಚಿಸುವ ಕುರಿತು ನಿರ್ಧರಿಸಲಾಯಿತು.

ಪುತ್ತೂರು ಕೇಂದ್ರವಾಗಿಟ್ಟುಕೊಂಡು ಸುಳ್ಯ, ಬೆಳ್ತಂಗಡಿ, ಕಡಬ, ವಿಟ್ಲ ತಾಲೂಕುಗಳಿಂದ 3 ರಿಂದ 5 ಜನ ಪ್ರಮುಖರನ್ನು ಸೇರಿಸಿ ಕೇಂದ್ರ ಸಮಿತಿ ರಚಿಸುವುದು. ಬಳಿಕ ಆಯಾ ತಾಲೂಕಿನ ಜಾತಿ ಸಂಘಟನೆ ಪ್ರಮುಖರು, ಸಂಘ ಸಂಸ್ಥೆಗಳು ಪ್ರಮುಖರು, ಜನಪ್ರತಿನಿಧಿಗಳು, ಅನುಭವಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ಹೋರಾಟಕ್ಕೆ ಸಜ್ಜಾಗುವ ಕುರಿತು ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು.

ಈಗಾಗಲೇ ಕೆಲವೊಂದು ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಪುತ್ತೂರನ್ನು ಜಿಲ್ಲೆಯನ್ನಾಗಿಸುವ ಕುರಿತು ಬೆಂಬಲಗಳು ವ್ಯಕ್ತವಾಗಿವೆ. ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲೆಯ ಕುರಿತು ಕೆಲವೊಂದು ಸೂಚನೆಗಳನ್ನು ಕಳುಹಿಸಿ ಪಂಚಾಯಿತಿ ಮಟ್ಟದ ಅಭಿಪ್ರಾಯಗಳನ್ನು ಸಂಗ್ರಹಿಸುವ ಕುರಿತು ಚರ್ಚಿಸಲಾಯಿತು.
ವೇದಿಕೆಯಲ್ಲಿ ಸಮಿತಿ ಕಾರ್ಯದರ್ಶಿ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ಸಮಿತಿಯ ಬಡೆಕ್ಕಿಲ ಪ್ರದೀಪ್ ಕುಮಾರ್, ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ನಿರಂಜನ ರೈ ಮಠಂತಬೆಟ್ಟು, ಸಾಜ ರಾಧಾಕೃಷ್ಣ ಆಳ್ವ, ರಾಜಾರಾಮ ರೈ ಕೋಲ್ಪೆಗುತ್ತು, ವಿದ್ಯಾಗೌರಿ, ಹರಿಣಾಕ್ಷಿ ಜೆ.ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಸಾದ್ ಕೌಶಲ್ ಶೆಟ್ಟಿ ಸಲಹೆ ಸೂಚನೆಗಳನ್ನು ನೀಡಿದರು. ಭಾಸ್ಕರ ಬಾರ್ಯ, ರಂಗನಾಥ ರಾವ್, ಕೃಷ್ಣಪ್ರಸಾದ್, ಸಂದೀಪ್ ಲೋಬೋ ಮುಂತಾದವರು ಉಪಸ್ಥಿತರಿದ್ದರು.

 

Related posts

Leave a Reply