
ಪುತ್ತೂರು ತಾಲೂಕಿನ 45 ಸರಕಾರಿ ಶಾಲೆಗಳ ಜಮೀನಿಗೆ ಇನ್ನೂ ಆರ್ಟಿಸಿ ಆಗಿಲ್ಲ ಎಂಬ ವಿಚಾರ ಪುತ್ತೂರು ತಾಲೂಕು ಪಂಚಾಯತಿ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಕಂದಾಯ ಇಲಾಖೆಗೆ ಸತತ ಪತ್ರ ಬರೆಯಲಾಗಿದ್ದರೂ ಇನ್ನೂ ಆಗಿಲ್ಲ ಎಂದು ಶಿಕ್ಷಣ ಇಲಾಖೆ ಆರೋಪಿಸಿದರೆ, ಜಮೀನು ಮಂಜೂರಾತಿಗೆ ಸಂಬಂಧಿಸಿದ ಮಂಜೂರಾತಿ ಆದೇಶ ಪತ್ರವನ್ನು ನೀಡುವಂತೆ ಕಂದಾಯ ಇಲಾಖೆ ತಾಕೀತು ಮಾಡಿತು.
ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಒಳಗಾಯಿತು. 46 ಶಾಲೆಗಳಿಗೆ ಆರ್ಟಿಸಿ ಆಗದೇ ಇರುವ ಬಗ್ಗೆ 2020ರ ನವೆಂಬರ್ನಿಂದ 2021ರ ಜನವರಿವರೆಗೆ 3 ಪತ್ರ ತಹಸೀಲ್ದಾರ್ ಕಚೇರಿಗೆ ಬರೆಯಲಾಗಿದೆ. ಈ ಪೈಕಿ ಸಾಜಾ ಶಾಲೆಗೆ ಆರ್ಟಿಸಿ ಆಗಿದೆ. ಉಳಿದ 45 ಶಾಲೆಗಳು ಬಾಕಿ ಇವೆ. ಈ ಬಗ್ಗೆ ತಹಸೀಲ್ದಾರ್ ಕಚೇರಿಗೆ ಮರು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೆ, ಕಟ್ಟತ್ತಾರು, ಬೆಳ್ಳಿಪ್ಪಾಡಿ, ಸಾಲ್ಮರ ಮತ್ತು ಎಟ್ಯಡ್ಕ ಶಾಲೆಗಳ ಗಡಿ ಗುರುತಿಗಾಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಶಿಕ್ಷಣ ಇಲಾಖೆಯ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಿದ್ದ ಸುಂದರ ಗೌಡ ಹೇಳಿದರು. ಮಂಜೂರಾತಿ ಆದೇಶ ಪತ್ರದ ಪ್ರತಿಯನ್ನು ಒದಗಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ನುಡಿದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚನೆ ನೀಡಿದರು. ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಉತ್ತರಿಸಿ, ಶಾಲೆಗೆ ಜಮೀನು ಕಾದಿರಿಸಿ ಆದೇಶವಾದ ಪ್ರಕರಣಗಳಿಗೆ ಆರ್ಟಿಸಿಯ 11ನೇ ಕಾಲಂನಲ್ಲಿ ದಾಖಲಿಸಲು ಭೂಮಿ ಕೇಂದ್ರಕ್ಕೆ ಮಾಹಿತಿ ನೀಡಲು ಕೋರಲಾಗಿದೆ ಎಂದರು. ತಾಪಂಗೆ ಸಂಬಂಧಿಸಿದ ನಿವೇಶನ, ಸ್ಮಶಾನ ಮತ್ತು ಘನತ್ಯಾಜ್ಯದ ಅಳತೆ ಕಾರ್ಯ ಮುಕ್ತಾಯವಾದ ಕೂಡಲೇ ಏಪ್ರಿಲ್ ತಿಂಗಳಲ್ಲಿ ಬಾಕಿ ಇರುವ ಶಾಲೆಗಳ ಗಡಿ ಗುರುತು ಅಳತೆ ಪ್ರಾರಂಭಿಸಲಾಗುವುದು ಎಂದವರು ನುಡಿದರು. ಸ್ಮಶಾನ ಮತ್ತು ಘನತ್ಯಾಜ್ಯ ಘಟಕ ನಿರ್ಮಿಸಲು ಅನೇ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಜಮೀನು ಸಿಕ್ಕಿಲ್ಲ ಎಂದು ತಾಪಂ ಕಾರ್ಯ ನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ರಮೇಶ್ ಬಾಬು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ ಉಪಸ್ಥಿತರಿದ್ದರು.