Header Ads
Header Ads
Breaking News

ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಅಶ್ವಥ ಮರದ ಕೊಂಬೆ ಕಡಿಯಲು ದೇವರೆದುರು ಅನುಮತಿ

ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಅಶ್ವಥ ಮರಗಳ ಕೊಂಬೆಯನ್ನು ಕತ್ತರಿಸಲು ಪುತ್ತೂರು ನಗರಸಭೆ ತೀರ್ಮಾನಿಸಿದೆ. ಹಿಂದೂ ಧಾರ್ಮಿಕ ಆಚರಣೆಯಲ್ಲಿ ಅಶ್ವಥ ಮರಕ್ಕೆ ಹೆಚ್ಚಿನ ಪ್ರಾವಿತ್ಯತೆಯಿರುವ ಕಾರಣಕ್ಕೆ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಿಂದ ವಿಶೇಷ ಪ್ರಾರ್ಥನೆಯನ್ನು ಮಾಡುವ ಮೂಲಕ ಮರದ ಕೊಂಬೆಗಳನ್ನು ಕಡಿಯಲು ದೇವರದೇ ಅನುಮತಿ ಕೇಳಲಾಯಿತು. 

ಪುತ್ತೂರು ಸರಕಾರಿ ಬಸ್ ನಿಲ್ದಾಣದ ಬಳಿಯಿರುವಂತಹ ಗಾಂಧಿಕಟ್ಟೆ ಹಾಗೂ ಅಶ್ವಥ ಮರವನ್ನು ತೆರವುಗೊಳಿಸಬೇಕೆಂಬ ಪ್ರಯತ್ನ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಇದಕ್ಕೆ ಪರಿಸರವಾದಿಗಳ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಗಾಂಧಿಕಟ್ಟೆ ಹಾಗೂ ಅಶ್ವಥ ಮರವನ್ನು ಪ್ರಸ್ತುತ ಇರುವ ಸ್ಥಳದಲ್ಲೇ ಉಳಿಸುವ ನಿಟ್ಟಿನಲ್ಲಿ ಮರದ ಕೊಂಬೆಗಳನ್ನು ಕಡಿಯಲು ತೀರ್ಮಾನಿಸಲಾಗಿತ್ತು. ಈ ನಿಟ್ಟಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳನ್ನು ಸ್ಥಳಕ್ಕೆ ಕರೆಸಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಮರದ ಕೊಂಬೆಗಳನ್ನು ಕಡಿಯಲು ಅನುಮತಿಯನ್ನು ಕೋರಲಾಗಿದೆ. ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಆಯುಕ್ತ ಹೆಚ್. ಕೃಷ್ಣಮೂರ್ತಿ, ನಗರಸಭೆಯ ಆಯುಕ್ತೆ ರೂಪಾ ಶೆಟ್ಟಿ ಕೂಡಾ ಉಪಸ್ಥಿತರಿದ್ದರು. ಮರ ಹಾಗೂ ಗಾಂಧಿ ಕಟ್ಟೆಯನ್ನು ಉಳಿಸಿ ಹೋರಾಟ ಸಮಿತಿಯ ಸದಸ್ಯರೂ ಸ್ಥಳೀಯಾಡಳಿತದ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದು, ಈ ಮರವನ್ನೇ ಆಶ್ರಯಿಸಿದ ಸಾವಿರಾರು ಸಂಖ್ಯೆಯ ಹಕ್ಕಿಗಳಿಗೆ ಮಾತ್ರ ಇನ್ನು ವಾಸಸ್ಥಾನವಿಲ್ಲದಂತಾಗಲಿದೆ.

Related posts

Leave a Reply