
ನವಚೇತನ ಹಿರಿಯ ನಾಗರಿಕರ ಬಡಾವಣೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪುತ್ತೂರಿನ ಶಾಂತಿಗೋಡು ಪರಿಸರದಲ್ಲಿ ನವಚೇತನ ರಿಟೈರ್ಮೆಂಟ್ ರೆಸಿಡೆನ್ಸಿ ವತಿಯಿಂದ ನವಚೇತನ ಹಿರಿಯ ನಾಗರಿಕರ ಬಡಾವಣೆ ನಿರ್ಮಾಣಗೊಂಡಿದೆ.ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜೀತಕಾಮಾನಂದಜೀ ಅವರು ನವಚೇತನ ಹಿರಿಯ ನಾಗರಿಕರ ಬಡಾವಣೆಯನ್ನು ಲೋರ್ಕಾಪಣೆಗೊಳಿಸಿ ಆಶೀರ್ವಚನ ನೀಡಿದರು. ಮನುಷ್ಯ ಮುಪ್ಪಿನಾವಸ್ಥೆಗೆ ತಲುಪುತ್ತಿದ್ದಂತೆ ಮಾನಸಿಕ ಧೋರಣೆ, ಚಿಂತನೆಗಳು ಬದಲಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಆತನಿಗೆ ಆತ್ಮಗೌರವದಿಂದ ಬಾಳಬೇಕಾದರೆ ಉತ್ತಮ ಪರಿಸರದ ಅವಶ್ಯಕತೆಯಿದ್ದು, ಇಂದು ಸಮಾಜಮುಖಿ ಚಿಂತನೆಯ ನಿಟ್ಟಿನಲ್ಲಿ ಎಲ್ಲಾ ಸೌಕರ್ಯಗಳನ್ನೊಳಗೊಂಡ ಹಿರಿಯರಿಗಾಗಿ ಬಡಾವಣೆ ನಿರ್ಮಾಣಗೊಳ್ಳುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಹಿರಿಯ ನಾಗರಿಕರ ಮಾರ್ಗದರ್ಶಿ ಕೈಪಿಡಿಯನ್ನು ಅನಾವರಣಗೊಳಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಸ್ತುತ ಒಂದೆಡೆ ತಂದೆ ತಾಯಿಯರು ವೈಭವದ ಜೀವನಕ್ಕಾಗಿ ಮಕ್ಕಳನ್ನು ವಿದೇಶಿಗರನ್ನಾಗಿ ಮಾಡಿದರೆ, ಇನ್ನೊಂದೆಡೆ ತನ್ನವರನ್ನೇ ಕಳೆದುಕೊಂಡು ಅವಿಭಕ್ತ ಕುಟುಂಬ ಎಂಬುದು ಮರೆಯಾಗಿದೆ. ಸಮಾಜದ ಬೆನ್ನೆಲುಬಾದ ಹಿರಿಯ ನಾಗರಿಕರು ನೆಮ್ಮದಿಯ ಬದುಕನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಮಾಣಗೊಂಡ ನವಚೇತನ ಬಡಾವಣೆ ಹೊಸತನವನ್ನು ವಯೋವೃದ್ಧರಿಗೆ ನೀಡುವಂತಾಗಲಿ ಎಂದರು.
ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ, ಬಾಹ್ಯಾಕಾಶ, ಅಣುಶಕ್ತಿ ಆಯೋಗ ಮತ್ತು ಭೂ ಆಯೋಗದ ಸದಸ್ಯ ವಿ.ವಿ.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ನಾಗರಿಕರು ಯಾವತ್ತೂ ಸಮಾಜಕ್ಕೆ ಭಾರವಾಗಬಾರದು. ಪ್ರತಿ ದಿನವೂ ಕ್ರಿಯಾಶೀಲವಾಗಿರುವ ಕೆಲವೊಂದು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನರಿಮೊಗರು ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಶುಭ ಹಾರೈಸಿದರು.
ನವಚೇತನ ಹಿರಿಯ ನಾಗರಿಕ ಬಡಾವಣೆಯ ರೂವಾರಿ ಡಾ.ಶ್ಯಾಮ್ ಭಟ್, ನಿರ್ದೇಶಕ ಪವನ್ ಕುಮಾರ್, ಸುಶೀಲಾ ಎಸ್.ಭಟ್ ಸ್ವಾತಿ ಬಡೆಕ್ಕಿಲ ಮೊದಲಾದವರು ಉಪಸ್ಥಿತರಿದ್ದರು.