Header Ads
Header Ads
Breaking News

ಪುತ್ತೂರು: ಪ್ರಕೃತಿಯ ನೆರಳಲ್ಲಿದ್ದ ಉಪನೋಂದಣಿ ಇಲಾಖೆ ಮಿನಿವಿಧಾನಸೌಧಕ್ಕೆ ಸ್ಥಳಾಂತರ

ಪುತ್ತೂರು: ಕಳೆದ ಎರಡು ವರ್ಷಗಳಿಂದ ಪರ ವಿರೋಧ ವಾದಗಳ ನಡುವೆಯೇ ಪರದಾಟವಾಡುತ್ತಿದ್ದ ಪುತ್ತೂರು ಉಪನೋಂದಣಿ ಇಲಾಖೆ ಕೊನೆಗೂ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯ ಪಕ್ಕದ ಪ್ರಕೃತಿಯ ನೆರಳಿನ ಸುಂದರ ತಾಣದಲ್ಲಿದ್ದ ಈ ಉಪನೋಂದಣಿ ಇಲಾಖೆ ಇದೀಗ ಕಾಂಕ್ರೀಟ್ ಸೌಧಕ್ಕೆ ವರ್ಗಾವಣೆಗೊಂಡಿದೆ. ಸರ್ಕಾರಿ ರಜಾ ಆದ ಸೋಮವಾರ ಉಪನೋಂದಣಿ ಇಲಾಖೆಯ ದಾಖಲೆಗಳನ್ನು ’ಗಂಟುಮೂಟೆ’ ಕಟ್ಟಿ ಮಿನಿವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ ಮಾಡುವ ಕೆಲಸ ನಡೆಯಿತು. ಎರಡು ವರ್ಷಗಳಿಂದ ಶಾಸಕರು, ಜಿಲ್ಲಾಧಿಕಾರಿ. ಸಹಾಯಕ ಆಯುಕ್ತರು ಸೇರಿದಂತೆ ತಾಪಂ ಸಾಮಾನ್ಯ ಸಭೆ, ಮಾಸಿಕ,ತ್ರೈಮಾಸಿಕ ಕೆಡಿಪಿಯಲ್ಲಿ ಜನಪ್ರತಿನಿಧಿಗಳು ಎಷ್ಟೇ ಬೊಬ್ಬೆ ಹೊಡೆದರೂ ಅಲುಗಾಡದ ಉಪನೋಂದಣಿ ಇಲಾಖೆಗೆ ಶಾಸಕ ಸಂಜೀವ ಮಠಂದೂರು ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ’ಬಿಸಿ’ ಮುಟ್ಟಿಸಿದ್ದರು.

ಮಳೆಗಾಲದ ನಂತರ ಸ್ಥಳಾಂತರ ನಡೆಸುವುದಾಗಿ ಹೇಳಿಕೆ ನೀಡಿದ್ದ ಉಪನೋಂದಣಿ ಇಲಾಖೆಯ ಅಧಿಕಾರಿಗಳು ಸ್ಥಳಾಂತರದ ಒತ್ತಡ ಹೆಚ್ಚಿದ ಹಿನ್ನಲೆಯಲ್ಲಿ ಇದ್ದಕ್ಕಿದ್ದಂತೆ ಸೋಮವಾರವೇ ಸ್ಥಳಾಂತರಕ್ಕೆ ಮುಂದಾಗಿದ್ದಾರೆ.ತೀರಾ ಹಳೆಯದಾದ ಈ ಉಪನೋಂದಣಿ ಇಲಾಖೆಯ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಇಲ್ಲಿಗೆ ಬರುವ ಜನತೆಗೆ ಮಾತ್ರ ಪ್ರಕೃತಿಯ ನೆರಳಿನ ಆಶ್ರಯವಿತ್ತು. ವಾಹನಗಳ ಪಾರ್ಕಿಂಗ್ ಗೆ ಬೇಕಾದಷ್ಟು ಸ್ಥಳವಿತ್ತು. ಇದೀಗ ಮಿನಿವಿಧಾನಸೌಧದ ಮೊದಲ ಅಂತಸ್ತಿನ ಮೂರು ಕೋಣೆಗಳಿಗೆ ಸ್ಥಳಾಂತರಗೊಂಡಿರುವ ಉಪನೋಂದಣಿ ಇಲಾಖೆಗೆ ಬರುವ ಮಂದಿ ಇವೆರಡನ್ನೂ ಕಳೆದುಕೊಳ್ಳಲಿದ್ದಾರೆ. ಇದರ ಜೊತೆಗೆ ಅಶಕ್ತರು ಮಿನಿವಿಧಾನಸೌಧದ ಉಪನೋಂದಣಿ ಕಚೇರಿಗೆ ತೆರಳುವುದೂ ಇನ್ನಷ್ಟು ಕಷ್ಟದಾಯಕ. ಉಪನೋದಣಿ ಇಲಾಖೆಯ ಸ್ಥಳಾಂತರದಿಂದ ಮಿನಿವಿಧಾನಸೌಧದ ಸುತ್ತಮುತ್ತ ಪಾರ್ಕಿಂಗ್ ಸಮಸ್ಯೆ ಇಲ್ಲಿನ ಅಧಿಕಾರಿಗಳನ್ನು ಮತ್ತು ಜನತೆಯನ್ನು ಕಾಡುವುದಂತೂ ಸತ್ಯ…!

ಪುತ್ತೂರು ಮಿನಿವಿಧಾನಸೌಧಕ್ಕೆ ತಾಲೂಕಿನ27 ಇಲಾಖಾ ಕಚೇರಿಗಳು ಬರಬೇಕು. ಪ್ರಸ್ತುತ ಇಲ್ಲಿರುವುದು ತಾಲೂಕು ಕಚೇರಿ, ಎಸಿ ಕಚೇರಿ ಹಾಗೂ ಸರ್ವೆ ಇಲಾಖಾ ಕಚೇರಿ. ಈ ಮೂರು ಕಚೇರಿಗಳ ಜೊತೆ ನೋಂದಣಿ ಇಲಾಖೆ ನಾಲ್ಕನೆಯದಾಗಿ ಮಿನಿವಿಧಾನಸೌಧ ಪ್ರವೇಶಿಸುತ್ತಿದೆ. ಮೂರು ಕಚೇರಿಗಳು ಇಲ್ಲಿ ಇರುವಾಗಲೇ ಇಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಪಾರ್ಕಿಂಗ್ ಸಮಸ್ಯೆ ಕಂಡು ಬರುತ್ತಿದೆ. ನೋಂದಣಿ ಇಲಾಖೆಯ ಅಧಿಕೃತ ಕಚೇರಿ ಆರಂಭವಾದರೆ ಈ ಸೌಧದ ಸುತ್ತ ವಾಹನಗಳೇ ತುಂಬಿಕೊಳ್ಳಲಿದೆ. ಇದರೊಂದಿಗೆ ಮಿನಿವಿಧಾನಸೌಧದಲ್ಲಿ ಲಿಪ್ಟ್ ಅಳವಡಿಸಲಾಗಿದ್ದರೂ ಅಶಕ್ತ ಹಾಗೂ ವಿಕಲಚೇತನ, ಆರೋಗ್ಯ ಸಮಸ್ಯೆ ಇರುವ ಮೊದಲ ಮಹಡಿಗೆ ಹೋಗಲು ಕಷ್ಟ ಪಡಬೇಕಾಗುತ್ತದೆ.

ಉಪನೋಂದಣಿ ಕಛೇರಿಗೆ ಗ್ರಾಮೀಣ ಭಾಗದ ಮಂದಿ ಹೆಚ್ಚಾಗಿ ಬರುತ್ತಿದ್ದು, ಇವರಿಗೆ ಕಚೇರಿಗೆ ತೆರಳಲು ಅನಾನುಕೂಲವಾಗುವ ಸ್ಥಿತಿಯೂ ಇದೆ.ಸ್ವಲ್ಪ ದಿನಗಳ ಬಳಿಕ ಪೂರ್ಣ ಸ್ಥಳಾಂತರ.ಪ್ರಸ್ತುತ ಉಪನೋಂದಣಾ ಇಲಾಖೆಯಿಂದ ದಾಖಲೆಗಳನ್ನು ಮಾತ್ರ ಒಯ್ಯಲಾಗುತ್ತಿದ್ದು, ಉಳಿದ ಪರಿಕರಗಳಾದ ಕಂಪ್ಯೂಟರ್,ಸರ್ವರ್ ಮೊದಲಾದವುಗಳನ್ನು ಸ್ಥಳಾಂತರ ಮಾಡಬೇಕಾದರೆ ಮಿನಿವಿಧಾನಸೌಧದಲ್ಲಿ ಸಮರ್ಪಕ ವ್ಯವಸ್ಥೆಗಳಾಗಬೇಕಿದೆ. ಹಾಗಾಗಿ ಕೆಲವು ದಿನಗಳ ಬಳಿಕ ಈ ಪರಿಕರಗಳ ಸ್ಥಳಾಂತರ ನಡೆಯಲಿದೆ ಎಂದು ಉಪನೋಂದಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Reply