Header Ads
Header Ads
Breaking News

ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಭೋಜನಶಾಲೆ ನಿರ್ಮಿಸಲು ನಿರ್ಧಾರ: ಸುಧಾಕರ ಶೆಟ್ಟಿ ಹೇಳಿಕೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನಛತ್ರದ ಕೊರತೆ ಇದ್ದು, ಪ್ರಸ್ತುತ ತಾತ್ಕಾಲಿಕ ಚಪ್ಪರದಲ್ಲಿ ನಿತ್ಯ ಊಟ ಬಡಿಸಲಾಗುತ್ತಿದೆ. ಈ ಕೊರತೆ ನಿವಾರಣೆಗೆ ನೂತನ ಭೊಜನಶಾಲೆ ನಿರ್ಮಿಸಲು ನಿರ್ಧರಿಸಲಾಗಿದೆ. 74 ಲಕ್ಷ ರೂ. ಮೊತ್ತದ ಯೋಜನೆಗೆ ಸರಕಾರ ಅನುಮತಿ ನೀಡಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಏಪ್ರಿಲ್ ಜಾತ್ರೋತ್ಸವದ ಹೊತ್ತಿಗೆ ಭೋಜನ ಶಾಲೆ ಪೂರ್ಣಗೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ. ಪ್ರಸ್ತುತ ದೇವಳದ ಕಚೇರಿ ಇರುವ ಹೊಸ ಕಟ್ಟಡವನ್ನೂ ಭೋಜನ ಶಾಲೆಗೆಂದೇ ಕಟ್ಟಲಾಗಿದ್ದರೂ ಸ್ಥಳಾವಕಾಶದ ಕೊರತೆ ಹೊಂದಿದೆ. ಹೀಗಾಗಿ ಈ ಕಟ್ಟಡವನ್ನು ಗಣ್ಯರ ಊಟಕ್ಕಾಗಿ ಮೀಸಲಿಡಲಾಗುವುದು. ಪಕ್ಕದಲ್ಲೇ ಹೊಸ ಭೋಜನ ಶಾಲೆ ನಿರ್ಮಿಸಲಾಗುವುದು ಎಂದರು.


ದೇವಳದ ಎದುರಿಗಿರುವ ನಟರಾಜ ವೇದಿಕೆ ಸಭಾಭವನ ಹಳತಾಗಿದ್ದು, ಕಾಯಕಲ್ಪ ಮಾಡಬೇಕಾಗಿದೆ. ಅದಕ್ಕಾಗಿ 2 ಪ್ರತ್ಯೇಕ ಕಾಮಗಾರಿ ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. 37.5 ಲಕ್ಷ ಮತ್ತು 30 ಲಕ್ಷ ರೂ.ಗಳ ಪ್ರತ್ಯೇಕ ಯೋಜನೆಯನ್ನು ಸರಕಾರದ ಅನುಮತಿ ಸಿಕ್ಕ ಕೂಡಲೇ ಆರಂಭಿಸಲಾಗುವುದು. ಇದರ ಪಕ್ಕದಲ್ಲಿರುವ ಶ್ರೀ ಮಹಾಲಿಂಗೇಶ್ವರ ಸಭಾಭವನದ ಗುತ್ತಿಗೆದಾರರಿಗೆ ಪಾವತಿ ಮಾಡಲು ಬಾಕಿ ಇದ್ದ 18.5 ಲಕ್ಷ ರೂ.ಗಳನ್ನು ಈ ವರ್ಷದ ಜಾತ್ರೋತ್ಸವದ ಆದಾಯದ ಹಣದಲ್ಲಿ ಪಾವತಿ ಮಾಡಲಾಗಿದೆ. ಗುತ್ತಿಗೆದಾರರ ಬಾಕಿ ಚುಕ್ತಾ ಮಾಡಿ ಕಟ್ಟಡವನ್ನು ದೇವಳದ ಸ್ವಾದೀನಕ್ಕೆ ಪಡೆದುಕೊಳ್ಳಲಾಗಿದೆ. ಕಟ್ಟಡ ಕಾಮಗಾರಿ ಪೂರ್ತಿಗೊಳ್ಳಬೇಕಾದರೆ ಇನ್ನೂ 74 ಲಕ್ಷ ರೂ. ಬೇಕು. ಅದಕ್ಕಾಗಿ ಮಂಜೂರಾತಿಗೆ ಸರಕಾರಕ್ಕೆ ಬರೆದಿದ್ದೇವೆ ಎಂದು ಅಧ್ಯಕ್ಷರು ನುಡಿದರು.
ದೇವಳದ ಹಳೆಯ ಪುಷ್ಪರಥ (ಪೂ ತೇರ್) ಬದಲಾಯಿಸಿ ಹೊಸ ರಥ ನಿರ್ಮಿಸಲಾಗುತ್ತಿದೆ. 22 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಾಣ ಕಾಮಗಾರಿ ಮೂಡುಬಿದರೆ ಬಳಿಯ ಅಶ್ವತ್ಥಪುರದಲ್ಲಿ ನಡೆಯುತ್ತಿದೆ. ಈ ಬಾರಿ ಜಾತ್ರೋತ್ಸವದ ಸಂದರ್ಭದಲ್ಲಿ ರಥ ಸಮರ್ಪಣೆಯಾಗಲಿದ್ದು, ಏಪ್ರಿಲ್ 16ರಂದು ಪುಷ್ಪರಥೋತ್ಸವ ಇದೇ ರಥದಲ್ಲಿ ನಡೆಯಲಿದೆ ಎಂದರು.


ದೇವಳದ ಪಶ್ಚಿಮ ಭಾಗದಲ್ಲಿರುವ ಐತಿಹಾಸಿಕ ಕೆರೆಯ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದೇವೆ. ಇದಕ್ಕೆ 50 ಲಕ್ಷ ರೂ.ಗಳ ಅಂದಾಜು ಪಟ್ಟಿ ಸಿದ್ಧವಾಗಿದೆ. 25 ಲಕ್ಷ ರೂ.ಗಳನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರ ಮಂಜೂರು ಮಾಡಿದೆ. ಉಳಿದ ಹಣವನ್ನು ಇಲಾಖೆಯ ಮಂಜೂರಾತಿ ಪಡೆದುಕೊಂಡು ಭರಿಸಿಕೊಂಡು ಕಾಮಗಾರಿ ನಡೆಸಲಾಗುವುದು ಎಂದರು.


ನನ್ನ ನೇತೃತ್ವದ ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಇನ್ನು 6 ತಿಂಗಳು ನಮ್ಮ ಅಧಿಕಾರವಿದೆ. ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇವಳದಲ್ಲಿ ತಾಂಬೂಲ ಪ್ರಶ್ನೆ ಇಟ್ಟು ದೇವರ ಇಚ್ಛೆಯನ್ನು ಅರ್ಥ ಮಾಡಿಕೊಂಡು ಅದರಂತೆ ಅಭಿವೃದ್ಧಿ ಕೆಲಸ ಆರಂಭಿಸಿದೆವು. 34,16, 241 ರೂ. ವೆಚ್ಚದಲ್ಲಿ ಹೊರಾಂಗಣ ಕಾಂಕ್ರಿಟೀಕರಣ ಮಾಡಿದ್ದೇವೆ. 3,97,000 ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ, 13 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ. 1.25 ಕೋಟಿ ರೂ. ವೆಚ್ಚದಲ್ಲಿ ರಾಜಗೋಪುರ ನಿರ್ಮಾಣಗೊಂಡಿದೆ. 1,80,000 ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. 4,25,000 ರೂ. ವೆಚ್ಚದಲ್ಲಿ ಸಮತಟ್ಟು ಕಾಮಗಾರಿ ನಡೆಸಲಾಗಿದೆ. 4 ಲಕ್ಷದಲ್ಲಿ ಇಂಟರ್‍ಲಾಕ್, 4 ಲಕ್ಷದಲ್ಲಿ ಬ್ರಹ್ಮರಥದ ಚಕ್ರ ರಿಪೇರಿ, 4 ಲಕ್ಷದಲ್ಲಿ ಮೂಲ ನಾಗ ಸಾನಿಧ್ಯ ಅಭಿವೃದ್ಧಿ, 2 ಲಕ್ಷದಲ್ಲಿ ನಾಗ ಸಾನಿಧ್ಯದ ಎದುರು ಇಂಟರ್‍ಲಾಕ್, ಮಾಜಿ ಶಾಸಕರ ನಿಧಿಯಿಂದ ಮೂಲ ಸೌಕರ್ಯ ಕಾಮಗಾರಿ ನಡೆದಿದೆ ಎಂದರು.


ನೂತನ ಕೊಡಿಮರವನ್ನು ಎಳ್ಳೆಣ್ಣೆಯಲ್ಲಿ ಮುಳುಗಿಸಿಡಲಾಗಿದೆ. ಜಾತ್ರೆಗೆ ಮೊದಲು ಧ್ವಜಸ್ತಂಭ ಪ್ರತಿಷ್ಠೆ ನಡೆಯಬೇಕಾಗಿದೆ. ಅದಕ್ಕೆ ಚಿನ್ನ ಲೇಪಿತ ತಗಡು ಮುಚ್ಚುವ ಕನಸಿದೆ. ಭಕ್ತರೆಲ್ಲ ಬಯಸಿದರೆ, ದೇಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬಂದರೆ ಮಾಡಲಾಗುವುದು. ಇದಕ್ಕೆ ಒಂದೂವರೆ ಕೋಟಿ ರೂ. ಬೇಕಾಗುತ್ತದೆ ಎಂದು ಸುಧಾಕರ ಶೆಟ್ಟಿ ಹೇಳಿದರು. ಅನ್ನ ಪ್ರಸಾದ ತಯಾರಾಗುವ ಸ್ಥಳಕ್ಕೆ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಸರಕಾರದಿಂದ ಸುತ್ತೋಲೆ ಬಂದಿದೆ. ಕೆಲವೇ ದಿನಗಳಲ್ಲಿ ಈ ಕೆಲಸ ನಡೆಯಲಿದೆ ಎಂದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಾನು ನಾಯ್ಕ, ಕಲ್ಲೇಗ ಸಂಜೀವ ನಾೈಕ್, ನಯನಾ ರೈ, ರೋಹಿಣಿ ಆಚಾರ್ಯ ಮತ್ತು ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply