Header Ads
Header Ads
Header Ads
Breaking News

ಪುತ್ತೂರು ’ಲಕ್ಷ್ಮೀದೇವಿ’ ಗೆ ನವರಾತ್ರಿ ಸಂಭ್ರಮ ಅಲಂಕಾರ ಪೂಜೆ ದೇವಿ ಕೃಪೆಗೆ ಪಾತ್ರವಾದ ಭಕ್ತರು

ಪುತ್ತೂರು; ಇತಿಹಾಸ ಪ್ರಸಿದ್ಧ ಶ್ರೀ ಲಕ್ಮೀದೇವಿ ಬೆಟ್ಟದಲ್ಲಿ 9 ದಿನಗಳ ಸಂಭ್ರಮದ ನವರಾತ್ರಿ ಉತ್ಸವವು ನಡೆಯಿತು.  ಕಬಕ ಪುತ್ತೂರು ರೈಲ್ವೇ ನಿಲ್ದಾಣ ಬಳಿಯಲ್ಲಿರುವ ಶ್ರೀ ಲಕ್ಮೀದೇವಿ ಬೆಟ್ಟ ಜನತೆಯ ಭಕ್ತಿಯ ತಾಣ. ಇಲ್ಲಿ ಲಕ್ಷ್ಮೀ ದೇವಿ ನೆಲೆಗೊಂಡ ಕ್ಷೇತ್ರ. ನೂರಾರು ವರ್ಷಗಳಿಂದ ನಿರಂತರವಾಗಿ ಇಲ್ಲಿ ಪೂಜೆ ನಡೆಯುತ್ತಿದೆ. ಭಕ್ತರು ನೆನೆಸಿದ ಕಾರ್ಯಗಳು ನೆರವೇರುವ ಕಾರಣಿಕ ಸ್ಥಳ ಎಂಬ ಖ್ಯಾತಿ ಪಡೆದಿರುವ ಈ ಬೆಟ್ಟ ಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆಯಂತೆ. ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಲಕ್ಷೀ ದೇವಿ ದೇವಸ್ಥಾನಕ್ಕೆ ಜಾತಿ ಧರ್ಮ ಮೀರಿದ ಭಕ್ತರಿದ್ದಾರೆ. ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದು ತಮ್ಮ ಕಷ್ಟಗಳನ್ನು ದೇವಿಯ ಮುಂದೆ ಇಟ್ಟು, ಸಮಸ್ಯೆ ಪರಿಹರಿಸಿಕೊಂಡು ಹೋಗುತ್ತಾರೆ.

 

ಜನತೆಯ ನಂಬಿಕೆಯ ತಾಣವಾಗಿರುವ ಲಕ್ಷೀದೇವಿ ಬೆಟ್ಟ ಪ್ರಸ್ತುತ ಭಕ್ತ ಜನರಿಂದ ತುಂಬಿರುವ ಕ್ಷೇತ್ರವಾಗಿ ಮಾರ್ಪಟ್ಟಿದೆ. ಪ್ರತೀ ನವರಾತ್ರಿ ಉತ್ಸವವನ್ನೂ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಿಯ ಸರ್ವಾಲಂಕಾರ ಪೂಜೆ ನವರಾತ್ರಿಯ ವಿಶೇಷ ಪೂಜೆಯಾಗಿದೆ. ಕುಂಕುಮ, ಬಳೆ ಹಾಗೂ ಹೂ ಪ್ರಸಾದ ರೂಪವಾಗಿ ಪಡೆದು ಭಕ್ತರು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಮನೆಗೆ ತಡೆಯಾಗಿ ಇಲ್ಲಿ ತೆಂಗಿನ ಕಾಯಿ ನೀಡುವ ಕ್ರಮವೂ ಇಲ್ಲಿದೆ. ಇದಲ್ಲದೆ ತುಲಾಭಾರ, ಗಣಹೋಮ,ದುರ್ಗಾಪೂಜೆ, ನವಗ್ರಹ ಶಾಂತಿಯಾಗ, ಪಾರ್ವತಿ ಸ್ವಯಂವರ ಪೂಜೆ, ವಾಹನ ಪೂಜೆ,ಸುದರ್ಶನ ಹೋಮ, ಸತ್ಯನಾರಾಯಣ ಪೂಜೆ ಚಂಡಿಕಾ ಯಾಗ, ಹೊಸಕ್ಕಿ ನೈವೇದ್ಯ, ದೇವಿ ದರ್ಶನ ಸೇರಿದಂತೆ ಸರ್ವಪೂಜಾ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಭಕ್ತರು ತೊಂದರೆ ಎಂದು ಬಂದಾಗ ಮಂತ್ರಿಸಿದ ನೂಲು ಕೊಡುವ ಕೆಲಸವೂ ಈ ಲಕ್ಷ್ಮೀ ದೇವಿ ಬೆಟ್ಟದಲ್ಲಿ ನಡೆಯುತ್ತಿದೆ. ವಿಶೇಷವಾಗಿ ಮಕ್ಕಳಾಗದ ದಂಪತಿಗಳು ಇಲ್ಲಿ ಸೇವೆ ಮಾಡಿದರೆ ಮಕ್ಕಳಾಗುವ ಭಾಗ್ಯವನ್ನೂ ಪಡೆಯುವ ಪ್ರತೀತಿ ಈ ದೇವಾಲಯಕ್ಕಿದೆ.

ನವರಾತ್ರಿ ಉತ್ಸವದಲ್ಲಿ 9 ದಿನಗಳ ಕಾಲ ಇಲ್ಲಿ ನಿರಂತರವಾಗಿ ಸೇವಾಕಾರ್ಯಕ್ರಮಗಳು ನಡೆಯುತ್ತವೆ. ಇದರ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ನವರಾತ್ರಿಯ ಕೊನೆಯ ದಿನವಾದ ಶುಕ್ರವಾರ ದೇವಳದ ಧರ್ಮದರ್ಶಿ ಎನ್. ಐತ್ತಪ್ಪ ಸಫಲ್ಯ ನೇತೃತ್ವದಲ್ಲಿ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಲವು ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಮಹಿಳೆಯರಿಂದ ಭಜನಾ ಕಾರ್ಯಕ್ರಮ, ಶ್ರೀ ದೇವಿಗೆ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಳದ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮೀ ದೇವಿ ಭಕ್ತ ವೃಂದದವರು ಸಹಕರಿಸಿದರು.

ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಿ ಬೆಟ್ಟ ದ ದೇವಳದಲ್ಲಿ ನಿತ್ಯ ಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿನ ದೇವಿಯ ಕೃಪೆಗೆ ಪಾತ್ರವಾಗಲು ಇಲ್ಲಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಭೇದ ಭಾವ ಇಲ್ಲದೆ ಭಕ್ತಾಧಿಗಳು ಬರುತ್ತಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಳ ನಾದುರಸ್ಥಿಯಲ್ಲಿದ್ದು, ಇದನ್ನು ನವೀಕರಿಸುವ ಕೆಲಸ ನಡೆಸಬೇಕಾಗಿದೆ.

ಇದೀಗ ದೇವಳದ ಜೀರ್ಣೋದ್ಧಾರ ಕಾರ್ಯಕ್ರಮ ಚಿಂತನೆ ನಡೆಸಲಾಗಿದ್ದು, ಸುಮಾರು ರೂ. 4.50 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಯಲಿದೆ. ಗರ್ಭಗುಡಿ ನಿರ್ಮಾಣಕ್ಕೆ 1.90 ಕೋಟಿ ವೆಚ್ಚವಾಗಲಿದೆ. ಪ್ರಸ್ತುತ ಕುಂಕುಮದಲ್ಲಿರುವ ಮೂರ್ತಿ ಇನ್ನು ಮುಂದೆ ಶಿಲೆಯಲ್ಲಿ ನಿರ್ಮಾಣವಾಗಲಿದೆ. ಮಾರ್ಚ್ ಮೀನಾ ಸಂಕ್ರಮಣ ದೇವಿಯ ಮುಖಕ್ಕೆ ಸೂರ್ಯರಶ್ಮಿ ನೇರವಾಗಿ ಬೀಳುವ ಕೌತುಕ ವೀಕ್ಷಿಸಿ ಸಾವಿರಾರು ಭಕ್ತರು ಇಲ್ಲಿ ಪುನೀತರಾಗುತ್ತಾರೆ ಎಂದು ದೇವಳದ ಧರ್ಮದರ್ಶಿ ಎನ್.ಐತ್ತಪ್ಪ ಸಫಲ್ಯ ತಿಳಿಸಿದರು.

ವರದಿ; ಅನೀಶ್ ಕುಮಾರ್ ಪುತ್ತೂರು

Related posts

Leave a Reply