Header Ads
Header Ads
Breaking News

ಪುತ್ತೂರು ವಿದ್ಯಾರ್ಥಿನಿ ಜೀವಿತಾ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್ ಬಹಿರಂಗಕ್ಕೆ ಆಗ್ರಹಿಸಿ ಪ್ರತಿಭಟನೆ

ಸೆಪ್ಟಂಬರ್ 24ರಂದು ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜೀವಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ನಡೆಸಿದರು.ಕಾಲೇಜಿಗೆ ಬಂದ ಜೀವಿತಾಳನ್ನು ಪ್ರಾಂಶುಪಾಲರು ಹೊರಗೆ ಕಳುಹಿಸಲು ಕಾರಣ ಹಾಗೂ ಜೀವಿತಾ ಹಾಗೂ ಪ್ರಾಂಶುಪಾಲರ ನಡುವೆ ನಡೆದ ಸಂಭಾಷಣೆಗಳೇನು ಹಾಗೂ ಆಕೆ ಆತ್ಮಹತ್ಯೆಗೆ ಮೊದಲು ಬರೆದ ಡೆತ್ ನೋಟನ್ನು ಬಹಿರಂಗಪಡಿಸಬೇಕೆಂದು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದರು.ಕೊಡಗು ಜಿಲ್ಲೆಯ ಸೋಮವಾರಪೇಟೆಯ ನಿವಾಸಿಯಾಗಿರುವ ಜೀವಿತಾ ಸೆಪ್ಟಂಬರ್ 24ರಂದು ಪುತ್ತೂರಿನ ನರಿಮೊಗರುನಲ್ಲಿರುವ ಸರಕಾರಿ ಬಾಲಕಿಯರ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೆ ಮೊದಲು ಆಕೆ ಡೆತ್ ನೋಟನ್ನೂ ಬರೆದಿದ್ದು, ಈ ಡೆತ್ ನೋಟನ್ನು ಪೋಲೀಸರು ಮುಚ್ಚಿಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆಕೆ ಕಲಿಯುತ್ತಿದ್ದ ಪುತ್ತೂರಿನ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದೆಯೇ ಆರೋಪಿಸಿದ್ದರು. ಈ ನಡುವೆ ಜೀವಿತಾ ಪೋಷಕರು ಕೊಂಬೆಟ್ಟು ಕಾಲೇಜಿಗೆ ಆಗಮಿಸಿ ಆಕೆಯ ಬಗ್ಗೆ ಪ್ರಾಂಶುಪಾಲರಲ್ಲಿ ಮಾತುಕತೆ ನಡೆಸಲು ಬಂದಿದ್ದರು. ಅಲ್ಲದೆ ಸೋಮವಾರದಂದು ಕಾಲೇಜಿಗೆ ಬಂದ ಜೀವಿತಾಳನ್ನು ಯಾವ ಕಾರಣಕ್ಕಾಗಿ ಹಾಸ್ಟೇಲ್‌ಗೆ ಕಳುಹಿಸಲಾಗಿದೆ ಎನ್ನುವ ಬಗ್ಗೆಯೂ ಮಾಹಿತಿಯನ್ನು ಪಡೆಯಲು ಬಯಸಿದ್ದರು. ಆದರೆ ಕಾಲೇಜಿನ ತರಗತಿಯ ಸಮಯ ಮುಗಿದ ಕಾರಣ ಪೋಷಕರನ್ನು ನಾಳೆ ಬರಲು ಹೇಳಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಕೆರಳಿಸಿದೆ. ಈ ಸಂದರ್ಭದಲ್ಲಿ ಪೋಷಕರು ಹಾಗೂ ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿಯೂ ನಡೆದಿದ್ದು, ಸ್ಥಳಕ್ಕೆ ಪುತ್ತೂರು ನಗರ ಪೋಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. 10 ದಿನಗಳ ಬಳಿಕ ಮನೆಯಿಂದ ಕಾಲೇಜಿಗೆ ಬಂದಿದ್ದ ಜೀವಿತಾ ಆರೋಗ್ಯದಿಂದಿದ್ದು, ಪ್ರಾಂಶುಪಾಲರು ಹೇಳುವಂತೆ ಆಕೆಗೆ ಯಾವುದೇ ಅನಾರೋಗ್ಯವೂ ಇರಲಿಲ್ಲ. ಆದರೆ ಪ್ರಾಂಶುಪಾಲರು ಇದೀಗ ಆಕೆ ಹುಷಾರಿಲ್ಲ ಎನ್ನುವ ಕಾರಣ ನೀಡಿ ಕಾಲೇಜಿನಿಂದ ಹಾಸ್ಟೇಲ್ ಗೆ ಹೊರಟಿದ್ದಳು ಎನ್ನುವ ಮಾಹಿತಿ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಹುಷಾರಿಲ್ಲದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವುದಾಗಲೀ, ಅಥವಾ ಆಕೆಯ ಹಾಸ್ಟೇಲ್‌ನಲ್ಲಿ ಆಕೆಯ ಬಗ್ಗೆ ಮಾಹಿತಿ ಪಡೆಯುವುದನ್ನಾಗಲೀ ಪ್ರಾಂಶುಪಾಲರು ಮಾಡದೆ ತನ್ನ ಬೇಜಾವಬ್ದಾರಿಯನ್ನು ಪ್ರದರ್ಶಿಸಿದ್ದಾರೆ ಎನ್ನುವ ಆರೋಪ ಜೀವಿತಾ ಪೋಷಕರದ್ದಾಗಿದೆ. ಅಲ್ಲದೆ ಹಾಸ್ಟೇಲ್ ಸಿಬ್ಬಂದಿಗಳ ಬೇಜಾವಬ್ದಾರಿಯೂ ಆಕೆಯ ಸಾವಿಗೆ ಕಾರಣವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕಾಲೇಜಿಗೆ ಸೋಮವಾರದಂದು ಬಂದಿದ್ದ ಜೀವಿತಾ ಅತ್ಯಂತ ಖುಷಿಯಿಂದಲೇ ಇದ್ದಳು. ಆದರೆ ಪ್ರಾಂಶುಪಾಲರ ಕೊಠಡಿಗೆ ಹೋಗಿ ಬಂದ ಬಳಿಕ ಜೀವಿತಾ ಮಂಕಾಗಿದ್ದಳು. ಅಲ್ಲದೆ ತರಗತಿ ನಡೆಯುವುದರ ಮಧ್ಯದಲ್ಲೇ ಕಣ್ಣೀರು ಹಾಕಿ ತರಗತಿಯಿಂದ ಹೊರಗೆ ನಡೆದಿದ್ದಳು ಎನ್ನುವುದು ಆಕೆಯ ಸಹಪಾಠಿಗಳ ಆರೋಪವಾಗಿದೆ. ಪ್ರಾಂಶುಪಾಲರ ವರ್ತನೆಯೇ ಆಕೆಯ ಸಾವಿಗೆ ಕಾರಣ ಎನ್ನುವ ಆರೋಪವೂ ವಿದ್ಯಾರ್ಥಿಗಳದ್ದಾಗಿದೆ. ಜೀವಿತಾ ಸಾವಿನ ವಿಚಾರವಾಗಿ ಪ್ರಾಂಶುಪಾಲರಲ್ಲಿ ಮಾಹಿತಿ ಪಡೆಯಲು ಕಛೇರಿಗೆ ಹೋದ ತಕ್ಷಣ ಪೋಲೀಸರನ್ನು ಕರೆಸುವ ಪ್ರಾಂಶುಪಾಲರು ಯಾವುದೋ ವಿಚಾರವನ್ನು ಮುಚ್ಚಿಡುತ್ತಿದ್ದಾರೆ ಎನ್ನುವ ಸಂಶಯವನ್ನೂ ವಿದ್ಯಾರ್ಥಿಗಳು ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ ಕಾಲೇಜು ಕ್ಯಾಂಪಸ್ ಗೆ ಬರುವ ಪೋಲೀಸರು ವಿದ್ಯಾರ್ಥಿಗಳ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪವೂ ವಿದ್ಯಾರ್ಥಿಗಳದ್ದಾಗಿದೆ. ತನ್ನ ಸಹಪಾಠಿಗಾಗಿ ನ್ಯಾಯ ಕೇಳುವ ಸಂದರ್ಭದಲ್ಲಿ ಪೋಲೀಸರು ಬಂದು ವಿದ್ಯಾರ್ಥಿಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಜೀವಿವಾ ಸಾವಿಗೀಡಾದ ಸಂದರ್ಭದಲ್ಲಿ ಬರೆದ ಡೆತ್ ನೋಟನ್ನು ಪೋಲೀಸರು ಮುಚ್ಚಿಡುತ್ತಿರುವ ಹಿಂದೆ ಹಲವು ಸಂಶಯಗಳೂ ಇವೆ ಎನ್ನುವುದು ವಿದ್ಯಾರ್ಥಿಗಳ ವಾದವಾಗಿದೆ. ಒಟ್ಟಾರೆಯಾಗಿ ಆತ್ಮಹತ್ಯೆ ಮಾಡಿಕೊಂಡ ಜೀವಿತಾ ಸಾವು ಇದೀಗ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೋಲೀಸರು ಆತ್ಮಹತ್ಯೆಗೆ ನಿಖರ ಕಾರಣವೇನು ಎನ್ನುವುದನ್ನು ಬಹಿರಂಗಪಡಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.

Related posts

Leave a Reply