Header Ads
Header Ads
Breaking News

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ : ಶಾಸಕರ ಭರವಸೆ ಹುಸಿ

ಪುತ್ತೂರು; ಪುತ್ತೂರು ಉಪವಿಭಾಗದ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಕಂಡುಬರುತ್ತಿದೆ. ಒಂದೆಡೆ ವೈದ್ಯರ ಕೊರತೆಯಾದರೆ ಮತ್ತೊಂದೆಡೆ ಸರತಿ ಸಾಲಿನಲ್ಲಿ ನಿಂತು ವೈದ್ಯರಿಗಾಗಿ ಕಾಯುತ್ತಿರುವ ರೋಗಿಗಳು. ಇನ್ನೊಂದೆಡೆ ಇರುವ ವೈದ್ಯರ ಮೇಲೆ ಬೀಳುತ್ತಿರುವ ಒತ್ತಡ. ಇವೆಲ್ಲದರ ನಡುವೆ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಅಗತ್ಯವಾಗಿರುವ ಜನರೇಟರ್ ಮತ್ತು ಸ್ಕಾನಿಂಗ್ ಮೆಷಿನ್ ಸಮಸ್ಯೆ…!

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಿಂದೆ ಒಂದು ಸ್ಕಾನಿಂಗ್ ಮೆಷಿನ್ ಇತ್ತು. ಇದು ಹಾಳಾಗಿ ಬರೋಬ್ಬರಿ 20 ವರ್ಷ ಕಳೆದಿದೆ. ಈ ಮಿಷನ್ ಈಗ ಎಲ್ಲಿದೆ ಎಂಬುವುದೇ ಯಾರಿಗೂ ಗೊತ್ತಿಲ್ಲ. ಅದನ್ನು ರಿಪೇರಿ ಮಾಡುವ ಯಾವ ಚಿಂತನೆಯೂ ನಡೆದಿಲ್ಲ. ಈಗ ಇದ್ದರೂ ’ಗುಜರಿ’ ಸೇರಬಹುದಾದ ಪರಿಸ್ಥಿತಿ. ತಿಂಗಳೊಂದಕ್ಕೆ ಸರಾಸರಿ 80 ಹೆರಿಗೆ ನಡೆಯುವ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮೆಷಿನ್ ಇಲ್ಲ..
ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮೆಷಿನ್ ಇಲ್ಲದಿರುವುದೇ ಖಾಸಗಿಯಾಗಿ ಸ್ಕಾನಿಂಗ್ ಮೆಷಿನ್ ಹಾಕಿರುವವರಿಗೆ ಹಬ್ಬದೂಟ. ಕನಿಷ್ಟ ಸ್ಕಾನಿಂಗ್ ಒಂದಕ್ಕೆ ರೂ.೪೦೦ರಿಂದ ಅಧಿಕ ದರ ವಿಧಿಸುವ ಈ ಖಾಸಗಿ ಸ್ಕಾನಿಂಗ್ ಮೆಷಿನ್ ಕೇಂದ್ರಗಳು ಸರ್ಕಾರಿ ಆಸ್ಪತ್ರೆಯ ರೋಗಿಗಳಿಂದಲೇ ಬದುಕುತ್ತಿವೆ ಎಂದರೂ ತಪ್ಪಿಲ್ಲ. ಪ್ರತಿಯೊಂದು ಗರ್ಭಿಣಿಯೂ ಕನಿಷ್ಟ 2 ಬಾರಿ ಸ್ಕಾನಿಂಗ್ ಮಾಡಿಸಲೇಬೇಕಾಗುತ್ತದೆ. ಇತರ ರೋಗಗಳಿಗೂ ಸ್ಕಾನಿಂಗ್ ಅವಶ್ಯಕತೆ ಇದ್ದು. ದಿನವೊಂದಕ್ಕೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಸುಮಾರು 500 ಕ್ಕೂ ಹೆಚ್ಚು ಮಂದಿಗೂ ಸ್ಕಾನಿಂಗ್ ಅವಶ್ಯಕತೆ ಬಿದ್ದರೆ ಈ ಖಾಸಗಿ ಸ್ಕಾನಿಂಗ್ ಸೆಂಟರ್ ಗಳೇ ದಿಕ್ಕು.
ಸರ್ಕಾರಿ ಅಸ್ಪತ್ರೆಯಲ್ಲಿಯೇ ಸ್ಕಾನಿಂಗ್ ಯಂತ್ರವಿದ್ದರೆ, ಯಾವುದೇ ಗರ್ಭಿಣಿಗೆ ಒಂದು ಸ್ಕಾನಿಂಗ್ ಉಚಿತ, ಹಾಗೂ ಮತ್ತೊಂದು ಸ್ಕಾನಿಂಗ್ ಅಲ್ಪದರದಲ್ಲಿ ದೊರೆಯುತ್ತದೆ. ಆದರೆ ಇದಕ್ಕೆ ರೇಡಿಯೋಲಾಜಿಸ್ಟ್ ವೈದ್ಯರೊಬ್ಬರ ಅವಶ್ಯಕತೆ ಇದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ವೈದ್ಯರೂ ಇಲ್ಲ. ಸ್ಕಾನಿಂಗ್ ಮೆಷಿನ್ ಕೂಡಾ ಇಲ್ಲ.

ಪುತ್ತೂರು ಸರ್ಕಾರಿ ಆಸ್ಪತ್ರೆಯ ಜನರೇಟರ್ ಸಮಸ್ಯೆಗೆ ಹಲವು ವರ್ಷಗಳ ಇತಿಹಾಸವಿದೆ. ಎಷ್ಟೋ ಸಂದರ್ಭದಲ್ಲಿ ಜನರೇಟರ್ ಕೆಟ್ಟು ಒಳರೋಗಿಗಳು, ಸಿಬ್ಬಂದಿಗಳು ಮತ್ತು ವೈದ್ಯರು ಮೇಣದ ಬತ್ತಿ ಹಚ್ಚಿ ಕುಳಿತ ದಿನಗಳೂ ಇವೆ. ಹಾಗಿದ್ದರೂ ಜನರೇಟರ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಜನಪ್ರತಿನಿಧಿಗಳು ಹೊಸ ಇಜನರೇಟರ್ ಖರೀದಿ ಮಾಡುತ್ತೇವೆ ಎಂದು ಹೇಳಿ ವರ್ಷ ಒಂದಾಯಿತು. ಆದರೂ ಜನರೇಟರ್ ಬಂದಿಲ್ಲ. ಸರ್ಕಾರಿ ಆಸ್ಪತ್ರೆ ಜನರೇಟರ್ ನ ಹಗಲು ಕನಸು ಕಾಣುತ್ತಲೇ ಇದೆ.

ಪುತ್ತೂರು ಸರ್ಕಾರಿ ಆಸ್ಪತ್ರೆ ರೋಗಿಗಳಿಂದ ತುಂಬಿ ಬಿಟ್ಟಿದೆ. ದಿನಗಟ್ಟಲೆ ವೈದ್ಯರಿಗಾಗಿ ಕಾದು ನಿಲ್ಲಬೇಕಾದ ಸ್ಥಿತಿ. 15 ಮಂದಿ ಇರಬೇಕಾದ ವೈದ್ಯರ ಪೈಕಿ ಕೇವಲ ೭ ಮಂದಿ ವೈದ್ಯರು ಇಡೀ ಆಸ್ಪತ್ರೆಯನ್ನು ನಿಭಾಯಿಸುವ ಅನಿವಾರ್ಯತೆ. ಇದರಲ್ಲೂ ಪ್ರಮುಖ ಹುದ್ದೆಯಾಗಿರುವ ಮಕ್ಕಳ ತಜ್ಞೆ ಜಿಪಂ ಅಧ್ಯಕ್ಷರ ಪ್ರಕರಣದಿಂದ ರಜೆಯ ಮೊರೆ ಹೋಗಿದ್ದಾರೆ. ಇವರ ಅನುಪಸ್ಥಿತಿ ಆಸ್ಪತ್ರೆಯ ರೋಗಿಗಳನ್ನು ಕಾಡುತ್ತಿದೆ. ಆಸ್ಪತ್ರೆಯಲ್ಲಿ ಇರಲೇಬೇಕಾದ ಶಸ್ತ್ರಚಿಕಿತ್ಸಾ ತಜ್ಞ ಮತ್ತು ವೈದ್ಯಕೀಯ ತಜ್ಞ ಪ್ರಮುಖ ಹುದ್ದೆಗಳು ಖಾಲಿಯಾಗಿವೆ. ಹೆರಿಗೆ ತಜ್ಞ ಡಾ.ಸಂದೀಪ್ ನಿಯೋಜನೆಯಡಿಯ ಮೇಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕು ವೈದ್ಯಾಧಿಕಾರಿ ಹುದ್ದೆ ಖಾಲಿಯಾಗಿದ್ದು. ಡಾ.ಆಶಾ ಪುತ್ತೂರಾಯ ಸದ್ಯ ಪ್ರಭಾರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇರುವ ವೈದ್ಯರಲ್ಲಿ ಒಬ್ಬರಾದ ಡಾ.ಜಗದೀಶ್ ಕೇವಲ 3 ದಿನ ಮಾತ್ರ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಉಳಿದ 3 ದಿನ ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ನಿಯೋಜನೆಯಲ್ಲಿರುತ್ತಾರೆ. ಹಾಗಾಗಿ ಪ್ರಸ್ತುತ ಕೇವಲ ೫ ಮಂದಿ ವೈದ್ಯರ ಮೇಲೆ ಇಡೀ ಆಸ್ಪತ್ರೆಯ ಭಾರ ಬಿದ್ದಿದೆ. ಆಸ್ಪತ್ರೆಗೆ ಬರುವ ಬಡವರ್ಗದ ಮಂದಿ ಬವಣೆ ಪಡುವಂತಾಗಿದೆ.

Related posts

Leave a Reply

Your email address will not be published. Required fields are marked *