Header Ads
Header Ads
Breaking News

ಪುರಸಭಾ ವ್ಯಾಪ್ತಿಯಲ್ಲಿ ಹಲವೆಡೆ ಬೀದಿ ದೀಪಗಳೇ ಉರಿಯುತ್ತಿಲ್ಲ:ಪುರಸಭಾ ಸದಸ್ಯೆ ರಮಣಿ ಆರೋಪ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಹಲವೆಡೆ ಬೀದಿ ದೀಪಗಳೇ ಉರಿಯುತ್ತಿಲ್ಲ. ಟೆಂಡರ್ ವಹಿಸಿಕೊಂಡವರು ನಮಗೆ ವೇತನ ಪಾವತಿಯಾಗಿಲ್ಲವೆಂದು ಉತ್ತರಿಸುತ್ತಾರೆ ಇದರಿಂದ ಜನತೆಗೆ ತೊಂದರೆಯಾಗಿದೆ. ಜನಪ್ರತಿನಿಧಿಗಳಾಗಿ ಪುರಸಭೆಗೆ ಬಂದರೆ ಕೇಳುವವರಿಲ್ಲ. ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿ ಹೀಗೆ ಯಾರೂ ಕಛೇರಿಯಲ್ಲಿ ಸಿಗುವುದಿಲ್ಲ.ಇಲ್ಲಿ ನಮಗೆ ಗೌರವ ಸಿಗುತ್ತಿಲ್ಲ ಎಂದು ಸದಸ್ಯೆ ರಮಣಿ ಬುಧವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ್ದಾರೆ.

ಪದಾಧಿಕಾರಿಗಳ ಕ್ಯಾಬಿನ್ ಕುರ್ಚಿಗಳಲ್ಲಿ ಪಾರ್ಸೆಲ್ ರಾಶಿ ಹಾಕುವುದಾದರೆ, ಕಛೇರಿಯಲ್ಲಿ ಕೇಳುವವರಿಲ್ಲದಂತಾಗಿದೆ ಎಂದ ರಮಣಿ ಅವರ ಮಾತಿಗೆ ಕೆರಳಿದ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ ಬರೇ ಆರೋಪಿಸಿದರೆ ಸಾಲದು. ವಿವರ ನೀಡಿ ಎಂದರು. ಸೂಕ್ತ ದಾಖಲೆ ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಶಿನ ನಾಯ್ಕ್ ಅವರೂ ದನಿಗೂಡಿಸಿದರು. ನೀವು ಬಂದಾಗ ನಾವು ಕಛೇರಿಯಲ್ಲಿರಬೇಕಾಗಿಲ್ಲ. ಆದರೆ ತುರ್ತು ವಿಷಯವಾದರೆ ಮೊಬೈಲ್‌ನಲ್ಲಿ ಸಂಪರ್ಕಿಸಬಹುದಾಗಿತ್ತಲ್ಲ ಎಂದು ಉಪಾಧ್ಯಕ್ಷ ವಿನೋದ್ ಸೆರಾವೋ ಏರು ದನಿಯಲ್ಲಿ ಪ್ರಶ್ನಿಸಿದಾಗ ರಮಣಿ ಮೌನಿಯಾದರು.

ಟೆಂಡರ್ ಪಡೆದುಕೊಂಡವರು ಸಿಬಂದಿಗಳಿಗೆ ವೇತನ ಪಾವತಿಸುವ ಜವಾಬ್ದಾರಿ ಹೊತ್ತವರು. ಅವರು ಪುರಸಭೆ ವೇತನ ಪಾವತಿಸಿಲ್ಲ ಎಂದು ಅಪ ಪ್ರಚಾರ ಮಾಡುವುದಾದರೆ ಅಂಥವರ ವಿರುದ್ಧ ಬಿಗು ಕ್ರಮ ಕೈಗೊಳ್ಳಿ ಎಂದು ಕೊರಗಪ್ಪ, ಸುರೇಶ್ ಕೋಟ್ಯಾನ್ ಸೂಚಿಸಿದರು.
ವಸತಿ ಸಂಕೀರ್ಣ ಮಾದರಿಯಲ್ಲಿ ಫಲಾನುಭವಿಗಳಿಗೆ ಮನೆ ಕಟ್ಟಿಕೊಡುವ ಯೋಜನೆಯಲ್ಲಿ ೩೦೦ ಚ.ಮೀ ವಿಸ್ತೀರ್ಣದ ಮನೆಗಳು ಈ ಭಾಗಕ್ಕೆ ಸೂಕ್ತವಾಗಿಲ್ಲ ಹಾಗಾಗಿ ಕಾನೂನಿನಲ್ಲಿ ತಿದ್ದುಪಡಿಗೆ ಅವಕಾಶ ಕೋರಲು ಸದಸ್ಯರಾದ ಸುರೇಶ್ ಕೋಟ್ಯಾನ್, ನಾಗರಾಜ ಪೂಜಾರಿ, ಪ್ರಸಾದ್ ಅವರಿಂದ ಸಲಹೆ ಕೇಳಿ ಬಂತು.

ಪ.ಜಾತಿ. ಪ.ವರ್ಗದವರಿಗೆ ನೀರಿನ ಸಂಪರ್ಕ ಉಚಿತ ನೀಡಲಾಗಿದೆ. ಆದರೆ ಅವರು ಬಿಲ್ ಕಟ್ಟುತ್ತಿಲ್ಲ ಎಂಬ ವಿಚಾರ ಪ್ರಸ್ತಾಪ ಬಂದಾಗ ಅದನ್ನು ಅದಾಲತ್ ಮೂಲಕ ಮನ್ನಾ ಮಾಡಲು ಪರಿಶೀಲಿಸಿ ಎಂದು ಬಾಹುಬಲಿ ಪ್ರಸಾದ್ ಮತ್ತಿತರರು ಸಲಹೆ ನೀಡಿದರು. ತಾನಿದನ್ನು ಡೀಸೀಯವರ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಕೊರಗಪ್ಪ ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಮುಖ ಕಛೇರಿ ಪ್ರಬಂಧಕ ಸೂರ್ಯಕಾಂತ ಖಾರ್ವಿ, ಪರಿಸರ ಅಭಿಯಂತರೆ ಶಿಲ್ಪಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply