Header Ads
Header Ads
Header Ads
Breaking News

ಪೇಜಾವರ ‘ವಿಶ್ವ’ ಸಂತ ಕೃಷ್ಣೈಕ್ಯ

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಬಾರದ ಲೋಕಕ್ಕೆ ಮರೆಯಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಡಿ.20ರಂದು ಮುಂಜಾನೆ 3 ಗಂಟೆ ಸುಮಾರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯುಮೋನಿಯಾ ಚಿಕಿತ್ಸೆ ಜತೆಗೆ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಕೆಎಂಸಿಯ ಆರು ತಜ್ಞ ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದರು. ಸ್ವಾಮೀಜಿಗಳಿಗೆ ಐಸಿಯುನಲ್ಲಿ ಸತತ ಚಿಕಿತ್ಸೆ ನೀಡಲಾಗಿತ್ತು. ಆರಂಭದಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸಿದ್ದರೂ, ಕ್ರಮೇಣ ಅವರ ದೇಹದ ಶಕ್ತಿ ತೀವ್ರ ಪ್ರಮಾಣದಲ್ಲಿ ಕುಂದಿತ್ತು. ಇದರಿಂದ ಅವರ ಆರೋಗ್ಯ ಗಣನೀಯವಾಗಿ ಕ್ಷೀಣಿಸಿತ್ತು. ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರ ಜತೆ ಸಂಪರ್ಕದಲ್ಲಿದ್ದ ಕೆಎಂಸಿ ವೈದ್ಯರು, ಅವರ ಆರೋಗ್ಯದ ಮಾಹಿತಿ ನೀಡುತ್ತಿದ್ದರು. ಶುಕ್ರವಾರ ಅವರ ಆರೋಗ್ಯದಲ್ಲಿ ತಕ್ಕಮಟ್ಟಿನ ಚೇತರಿಕೆ ಕಂಡುಬಂದಿತ್ತು. ಆದರೆ ಶನಿವಾರ ಮಧ್ಯಾಹ್ನದ ಬಳಿಕ ಮತ್ತಷ್ಟು ಕ್ಷೀಣಿಸಿತ್ತು. ಅವರನ್ನು ಉಳಿಸುವ ಯಾವ ಪ್ರಯತ್ನಗಳೂ ಫಲಿಸಲಿಲ್ಲ. ಇಂದು ಮಧ್ಯಾಹ್ನ 2 ಗಂಟೆವರೆಗೆ ಉಡುಪಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಿದ್ದು, ನಂತರ ಬೆಂಗಳೂರು ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬೆಂಗಳೂರಿನ ಮಠದಲ್ಲಿ ಸಂಜೆ ಅಂತಿಮ ವಿಧಿ ವಿಧಾನ ನಡೆಸಲಾಗುವುದು.
ಕೃತಕ ಉಸಿರಾಟದಲ್ಲಿದ್ದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಅವರ ಕೊನೆಯ ಆಸೆಯಂತೆ ಉಡುಪಿ ಮಠಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರ ನಿಧನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಪೇಜಾವರ ಶ್ರೀಗಳು ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು, ಉಡುಪಿ ಮಠದ ಭಕ್ತರು ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದ್ದರು. ಆದರೆ ಅವರ ಪ್ರಾರ್ಥನೆ ಕೈಗೂಡಲಿಲ್ಲ. ಪೇಜಾವರ ಶ್ರೀಗಳ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದರಿಂದ ಅವರ ಚಿಕಿತ್ಸೆಗೆ ತೊಂದರೆಯಾಗುತ್ತಿದೆ ಎಂದು ಆಸ್ಪತ್ರೆಯು ಅವರನ್ನು ನೋಡಲು ಬರುವವರಿಗೆ ನಿರ್ಬಂಧ ವಿಧಿಸಿತ್ತು.

1931ರ ಏಪ್ರಿಲ್ 27ರಂದು ಉಡುಪಿಯಿಂದ ಸುಮಾರು 120 ಕಿ.ಮೀ. ದೂರದ ಸುಬ್ರಮಣ್ಯ ಸಮೀಪದ ರಾಮಕುಂಜ ಎಂಬ ಹಳ್ಳಿಯಲ್ಲಿ ಜನಿಸಿದ ವಿಶ್ವೇಶ ತೀರ್ಥ ಸ್ವಾಮೀಜಿ, ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ 33ನೇ ಮಠಾಧೀಶರಾಗಿ ಸೇವೆ ಸಲ್ಲಿಸಿದ್ದರು. ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೆಯ ಮಗನಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಮೂಲ ಹೆಸರು ವೆಂಕಟರಮಣ. ಆರು ವರ್ಷದ ಬಾಲಕನಿದ್ದಾಗ ಅವರ ಪೋಷಕರು ಉಡುಪಿ ಪೇಜಾವರ ಮಠದ ಪರ್ಯಾಯಕ್ಕೆ ಕರೆದೊಯ್ದಿದ್ದರು. ಆಗಿನ ಪೇಜಾವರ ಮಠಾಧೀಶರಾದ ವಿಶ್ವಮಾನ್ಯ ತೀರ್ಥರಿಂದ ಪ್ರಭಾವಿತರಾಗಿ ತಮ್ಮ ಎಂಟನೇ ವಯಸ್ಸಿನಲ್ಲಿ ಹಂಪಿಯಲ್ಲಿ ದೀಕ್ಷೆ ಪಡೆದರು. ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ ವಿಶ್ವೇಶ ತೀರ್ಥ ಎಂಬ ಹೆಸರಿನೊಂದಿಗೆ ವೇದಾಂತ ಪೀಠವನ್ನೇರಿದ್ದರು. 1954ರಲ್ಲಿ ವಿಶ್ವೇಶ ತೀರ್ಥರು ಮೊದಲ ಪರ್ಯಾಯ ನಡೆಸಿದ್ದರು. ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಗಳ ಬಳಿಕ ಐದು ಪರ್ಯಾಯಗಳನ್ನು ನಡೆಸಿದ ಏಕೈಕ ಸ್ವಾಮೀಜಿ ಎನಿಸಿದ್ದಾರೆ. ಉಡುಪಿಯ ಎಂಟು ಮಠಗಳ ಮಠಾಧೀಶರಲ್ಲಿಯೇ ಅತ್ಯಂತ ಪ್ರಭಾವಶಾಲಿಯಾಗಿದ್ದ ವಿಶ್ವೇಶ ತೀರ್ಥರು, ಜಾಗತಿಕ ಮನ್ನಣೆ ಗಳಿಸಿದ್ದರು. ರಾಜಕೀಯ, ಸಾಮಾಜಿಕ ವಿಚಾರಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು.

Related posts

Leave a Reply

Your email address will not be published. Required fields are marked *