Header Ads
Breaking News

ಪೈಪ್‌ಲೈನ್ ಒಡೆದು ಲೀಟರ್‌ಗಟ್ಟಲೆ ನೀರು ಪೋಲು: ಕನ್ಯಾನ ಕೆಳಗಿನಪೇಟೆಯಲ್ಲಿ ಘಟನೆ

ವಿಟ್ಲ: ಅಧಿಕಾರಿಗಳ ಬೇಜಾಬ್ದಾರಿತನದಿಂದಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪು ಲೈನ್ ಒಡೆದು ಲೀಟರ್ ಗಟ್ಟಲೆ ನೀರು ಪೋಲಾಗಿ, ವಾಹನ ಚಾಲಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದ ಘಟನೆ ಕನ್ಯಾನ ಪೇಟೆಯ ಕೆಳಗಿನಪೇಟೆಯಲ್ಲಿ ನಡೆದಿದೆ.

ಇಲ್ಲಿ ನೀರು ಚಿಮ್ಮುತ್ತಿರುವ ದೃಶ್ಯ ಮಳೆಯಿಂದ ಅಥವಾ ಕಾರಂಜಿ ದೃಶ್ಯ ಎಂದು ಭಾವಿಸಬೇಡಿ. ಇದು ಬಹುಗ್ರಾಮ ಕುಡಿಯುನ ನೀರಿನ ಯೋಜನೆಯ ಯಡವಟ್ಟಾಗಿದೆ. ಹೌದು ಕನ್ಯಾನ ಪೇಟೆಯ ಕೆಳಗಿನಪೇಟೆಯ ಶಿರಂಕಲ್ಲು ಕ್ರಾಸ್ ಬಳಿಯಿಂದ ಹಾದುಹೋಗುತ್ತಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಆಕಸ್ಮಿಕವಾಗಿ ಒಡೆದು ಹೋಗಿದೆ. ಇದರಿಂದ ನೀರು ಆಕಾಶದೆತ್ತರಕ್ಕೆ ಚಿಮ್ಮಿದೆ. ಇದರಿಂದ ಸುತ್ತಮುತ್ತಲಿನ ಅಂಗಡಿಯವರಿಗೆ, ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಚಾಲಕರಿಗೆ ತೊಂದರೆಯಾಗಿದೆ. ಕೆಲವರಂತೂ ನೀರು ಚಿಮ್ಮುತ್ತಿದ್ದ ವೇಳೆ ತಮ್ಮ ವಾಹನವನ್ನು ನಿಲ್ಲಿಸಿ ಕೊಳೆಯನ್ನು ತೊಳೆದು ಹಾಕುವ ಮೂಲಕ ಲಾಭ ಪಡೆದುಕೊಂಡಿದ್ದಾರೆ. ಇನ್ನೂ ಕೆಲವು ವಾಹನಗಳ ಒಳಗಡೆ ನೀರು ಹೋಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.

ಸಂಪೂರ್ಣವಾಗಿ ನೀರಿನ ಸಮಸ್ಯೆ ನೀಗಿಸಲು ವಿಟ್ಲಪಡ್ನೂರು, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ ಗ್ರಾಮಗಳಲ್ಲಿ 26ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿತ್ತು. ಕಳೆದ ವರ್ಷ ಆದರೆ ಈ ತನಕವೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ವಿಫಲಗೊಂಡಿತ್ತು. ಕಳೆದ ಕೆಲವು ದಿನಗಳಿಂದ ನೀರು ಸರಬರಾಜು ಆಗುತ್ತಿತ್ತು. ಆದರೆ ಪೈಪುಲೈನ್‌ಗಳು ಒಡೆದು ನೀರು ಪೋಲಾಗುತ್ತಿದೆ. ಕನ್ಯಾನ ಕೆಳಗಿನ ಪೇಟೆಯಲ್ಲಿ ಮಂಗಳವಾರ ಒಡೆದು ಹೋಗಿದ್ದ ಪೈಪುಲೈನ್ ದುರಸ್ತಿ ಮಾಡಲಾಗಿತ್ತು. ಇದೀಗ ಮತ್ತೆ ಅದೇ ಪೈಪು ಹೊಡೆದು ನೀರು ಪೋಲಾಗಿದೆ. ಸುಮಾರು ಅರ್ಧ ತಾಸುಗಳ ವರೆಗೆ ನೀರು ಪೋಲಾಗುತ್ತಿತ್ತು.
ಉತ್ತಮ ದರ್ಜೆಯ ಪೈಪ್ ಇದೆ. ಆದರೆ ಅನೇಕ ಕಡೆಗಳಲ್ಲಿ ಅವುಗಳನ್ನು ಜೋಡಿಸಿದ ರೀತಿ ವೈಜ್ಞಾನಿಕವಲ್ಲ. ಆದುದರಿಂದ ಎಷ್ಟೋ ಕಡೆಗಳಲ್ಲಿ ನೀರು ಪೋಲಾಗುತ್ತಿದೆ. ಕನ್ಯಾನ ಗ್ರಾಮದ ಕಮ್ಮಜೆಯಲ್ಲಿ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿದೆ. ಯಾರಿಗೂ ಸಿಗುತ್ತಿಲ್ಲ ಎಂದು ಆರೋಪ ವ್ಯಕ್ತವಾಗಿದೆ. ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದ ಈ ಅವ್ಯವಸ್ಥೆ ಆಗಿದೆ ಎನ್ನುವ ಮಾತೂ ಕೇಳಿಬರುತ್ತಿದೆ.

Related posts

Leave a Reply

Your email address will not be published. Required fields are marked *