Header Ads
Header Ads
Breaking News

’ಪೊಲೀಸ್ ಇಲಾಖೆ ಮಿತಿಮೀರಿದ ಕಾನೂನು’ಪುತ್ತೂರಿನಲ್ಲಿ ರಿಕ್ಷಾ ಚಾಲಕರ ಸಂಯುಕ್ತ ಸಮಿತಿ ಪ್ರತಿಭಟನೆ

ಪುತ್ತೂರು; ಬೆಲೆ ಏರಿಕೆಯಂತಹ ಸಮಸ್ಯೆಗಳ ನಡುವೆಯೂ ಅಲ್ಪ ದರದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ನಿಷ್ಟಾವಂತ ಸೇವೆಯನ್ನು ರಿಕ್ಷಾ ಚಾಲಕರು ನಡೆಸುತ್ತಿದ್ದಾರೆ. ಇಂತಹ ರಿಕ್ಷಾ ಚಾಲಕರಿಗೆ ಪೊಲೀಸ್ ಇಲಾಖೆ ತೊಂದರೆ ನೀಡಬಾರದು ಎಂದು ಕರ್ನಾಟಕ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಹೇಳಿದರು.

ಪುತ್ತೂರು ಮಿನಿವಿಧಾನ ಸೌಧದ ಎದುರು ಅಟೋ ಚಾಲಕರ ಮಾಲಕರ ಸಂಯುಕ್ತ ಹೋರಾಟ ಸಮಿತಿ ಆಶ್ರಯದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಬಡತನದ ಬದುಕಿನಲ್ಲಿರುವ ಈ ರಿಕ್ಷಾ ಚಾಲಕರು ಮಕ್ಕಳನ್ನು ಮನೆಯವರಂತೆ ಭದ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಕೇವಲ ಕಾನೂನಿನ ದೃಷ್ಟಿ ಹೊಂದಿ ಪೊಲೀಸ್ ಇಲಾಖೆ ರಿಕ್ಷಾ ಚಾಲಕರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಕಾನೂನಿನ ಜತೆ ಮಾನವೀಯತೆಯೂ ಅಗತ್ಯ. ಕನಿಷ್ಟ 10 ಮಕ್ಕಳನ್ನು ರಿಕ್ಷಾ ದಲ್ಲಿ ಒಯ್ಯುವ ಅವಕಾಶವನ್ನು ಪೊಲೀಸ್ ಇಲಾಖೆ ನೀಡಬೇಕು ಎಂದು ಆಗ್ರಹಿಸಿದ ಅವರು ಪಾರ್ಕಿಂಗ್ ಸಮಸ್ಯೆ ಅಧಿಕಾರಿಗಳಿಂದಾಗಿ ಉಂಟಾಗಿದೆ. ಇಲ್ಲಿನ ಸರ್ಕಾರಿ ಸ್ಥಳಗಳನ್ನು ’ಹಲ್ವಾ’ದಂತೆ ಸಂಘಸಂಸ್ಥೆಗಳಿಗೆ ಮಾರಾಟ ಮಾಡಿದ ಪರಿಣಾಮ ಇಂದು ಪಾರ್ಕಿಂಗ್ ಗೆ ಸ್ಥಳವೇ ಇಲ್ಲದಂತೆ ಮಾಡಲಾಗಿದೆ ಎಂದು ಅವರು ದೂರಿದರು.
ಎಸ್‌ಡಿಎಸಿಯು ರಿಕ್ಷಾ ಚಾಲಕ ಮಾಲಕ ಸಂಘದ ಜಿಲ್ಲಾ ಸಂಚಾಲಕ ಜಾಬೀರ್ ಅರಿಯಡ್ಕ ಮಾತನಾಡಿ, ಯಾವುದೇ ಮೋಟಾರು ಕಾಯ್ದೆ ಬಂದರೂ ಅದಕ್ಕೆ ಮೊದಲ ಬಲಿಪಶು ರಿಕ್ಷಾ ಚಾಲಕ. ಪೊಲೀಸ್ ಇಲಾಖೆ ಇದೇ ನೀತಿ ಅನುಸರಿಸಿದರೆ ರಿಕ್ಷಾ ಚಾಲಕರು ತಮ್ಮ ಕುಟುಂಬದ ಸಹಿತ ಮಿನಿವಿಧಾನಸೌಧದ ಮುಂದೆ ಉಗ್ರಪ್ರತಿಭಟನೆ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸ್ನೇಹಸಂಗಮ ರಿಕ್ಷಾ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ವಿವಿಧ ರಿಕ್ಷಾ ಸಂಘಟನೆಗಳ ಕಾನೂನು ಸಲಹೆಗಾರರಾದ ದೇವಾನಂದ ಕೆ, ಹರಿಣಾಕ್ಷಿ ಜೆ.ಶೆಟ್ಟಿ, ದಿವ್ಯರಾಜ್ ಹೆಗ್ಡೆ, ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಕೆ.ಜಯರಾಮ ಕುಲಾಲ್ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *