Breaking News

ಪೊಲೀಸ್, ಗಣಿ ಅಧಿಕಾರಿಗಳಿಂದ ಬಜ್ಪೆ ಅಕ್ರಮ ಮರಳು ಅಡ್ಡೆಗೆ ದಾಳಿ, ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ಮುಟ್ಟುಗೋಲು


ಅಕ್ರಮ ಮರಳು ಅಡ್ಡೆಗೆ ಬಜ್ಪೆ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು, ಲಕ್ಷಾಂತರ ರೂ. ಮೌಲ್ಯದ ಮರಳನ್ನು ಮುಟ್ಟುಗೋಲು ಹಾಕಿದ್ದಾರೆ.
ಸರಿಸುಮಾರು ೧೩೪ ಲೋಡ್‌ಗಳಿಗಿಂತಲೂ ಅಧಿಕ ಮರಳನ್ನು ಮುಟ್ಟುಗೋಲು ಹಾಕಲಾಗಿದ್ದು, ಇದು ಯಾರಿಗೆ ಸಂಬಂಧಿಸಿದ್ದು ಎನ್ನುವ ಬಗ್ಗೆ ತನಿಖೆ ನಡೆಸಿ ಬಳಿಕ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಅಕ್ರಮವಾಗಿ ಶೇಖರಿಸಿಟ್ಟಿರುವವರ ಪೈಕಿ ಒಟ್ಟು ೮ರಿಂದ ೯ ಮಂದಿಗೆ ಈ ಮರಳು ಸೇರಿದ್ದು, ದಾಳಿ ವೇಳೆ ಅವರೆಲ್ಲಾ ತಪ್ಪಿಸಿಕೊಂಡಿದ್ದಾರೆ.
ಸೋಮವಾರ ೧೨ ಕಡೆಗೆ ಏಕ ಕಾಲದಲ್ಲಿ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದಾರೆ. ಬಜ್ಪೆ ಠಾಣಾ ವ್ಯಾಪ್ತಿಯ ಮುತ್ತೂರು ಸಮೀಪದ ಮಾರ್ಗದಂಗಡಿ, ಕುಪ್ಪೆಪದವು ಸೈಟ್, ಗಂಜಿಮಠ, ಮುರ, ಸುರಲ್ಪಾಡಿ, ಬಜ್ಪೆ ವಿಮಾನ ನಿಲ್ದಾಣದ ಸಿಗ್ನಲ್ ಹೊಂದಿರುವ ಕಂದಾವರ ಮುಂತಾದ ಕಡೆಗಳಿಗೆ ಏಕಕಾಲದಲ್ಲಿ ಈ ದಾಳಿ ನಡೆದಿದೆ. ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರ ವರ್ಗಾವಣೆಯ ಬೆನ್ನಲ್ಲೇ ಅವರ ಹಾಗೂ ಜಿಲ್ಲಾಧಿಕಾರಿ ಅವರ ಸೂಚನೆಯ ಸೂಚನೆಯ ಮೇರೆಗೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಮರಳು ಎತ್ತುವ ಷರತ್ತುಗಳನ್ನು ಗಾಳಿಗೆ ತೂರಿ ಪರಿಣಾಮ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಫಲ್ಗುಣಿ ನದಿಯಿಂದ ಮರಳೆತ್ತಲು ಪಿಡಬ್ಲ್ಯುಡಿ ಇಲಾಖೆಯಿಂದ ಅನುಮತಿ ಇದ್ದು ಅದನ್ನು ಗಂಜಿಮಠ ಯಾರ್ಡ್‌ನಲ್ಲಿ ಶೇಖರಿಸಿಡಬಹುದಿತ್ತು. ಗಂಜಿಮಠ ಪ್ರದೇಶದಲ್ಲಿ ಮರಳು ಶೇಖರಿಸಲು ಲಾರಿಗಳು ಟ್ರಿಪ್‌ಶೀಟ್ ಹೊಂದಿದ್ದು, ಆದರೆ ಮರಳನ್ನು ಅನಧಿಕೃತವಾಗಿ ಬೇರೆಡೆಗೆ ಸಾಗಿಸುವ ಕೆಲಸವನ್ನು ಮರಳು ಮಾಲಕರು ನಡೆಸುತ್ತಿದ್ದರು. ಗಂಜಿಮಠ ಯಾರ್ಡ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಮರಳನ್ನು ಶೇಖರಿಸಿಟ್ಟಿದ್ದಲ್ಲದೆ, ಕೆಲವೊಂದು ಕಡೆ ಮರಳನ್ನು ಬಚ್ಚಿಡುವ ಕೆಲಸವೂ ನಡೆದಿತ್ತು. ಈ ಬಗ್ಗೆ ಇಲಾಖೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಜ್ಪೆ ಪೊಲೀಸ್ ಇನ್ಸ್‌ಪೆಕ್ಟರ್ ಟಿ. ಡಿ. ನಾಗರಾಜ್ ಪಿಡಬ್ಲ್ಯುಡಿ ಅಧಿಕಾರಿಗಳು, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂರ್ತಿ ಸಹಯೋಗದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಶೇಖರಿಸಿದ ಮರಳನ್ನು ಮುಟ್ಟುಗೋಲು ಹಾಕಲಾಗಿದೆ. ಕುಪ್ಪೆಪದವು, ಮಳಲಿಯಲ್ಲಿ ಸ್ಥಳೀಯ ಪರ್ಮಿಟ್ ಆಧಾರದಲ್ಲಿ ಮರಳೆತ್ತುವ ಕಾರ್ಯ ನಡೆಯುತ್ತಿತ್ತು. ನಿಯಮಗಳನ್ನು ಗಾಳಿಗೆ ತೂರಿದ ಬಗೆಗೆ ವಾಹಿನಿ ಈ ಮುಂಚೆಯೇ ವರದಿ ಬಿತ್ತರಿಸಿ ಇಲಾಖೆಯನ್ನು ಎಚ್ಚರಿಸಿತ್ತು. ದಿನಕ್ಕೆ ಸಾವಿರಾರು ಟನ್‌ಗಳಷ್ಟು ಮರಳೆತ್ತಿ ಅವುಗಳನ್ನು ಸಾಗಿಸಲಾಗುತ್ತಿದೆ.

Related posts

Leave a Reply