
ಪೊಲೀಸ್ ಠಾಣೆಯ ಮೆಟ್ಟಿಲೇರಲು ಹಿಂದೆ ಮುಂದೆ ನೋಡವವರೇ ಹೆಚ್ಚು. ಆದರೆ, ಇಲ್ಲೊಬ್ಬರು ಠಾಣೆಯನ್ನೇ ವಸತಿಯಾಗಿಸಿ, ಪೆÇಲೀಸರನ್ನೇ ಬಂಧುಗಳನ್ನಾಗಿಸಿ ಸುಮಾರು ನಾಲ್ಕು ದಶಕಗಳ ಕಾಲ ಕಳೆದಿದ್ದಾರೆ. ಈಕೆಗೆ ಅಂದಿನಿಂದ ಇಂದಿನವರೆಗೂ ಪೊಲೀಸ್ ಠಾಣೆಯೇ ಮನೆ. ಆಧಾರ್ ಕಾರ್ಡ್ನಲ್ಲಿ ಪೊಲೀಸ್ ಠಾಣೆಯದೇ ವಿಳಾಸ. ಪೊಲೀಸ್ ಸಿಬ್ಬಂದಿಗಳೇ ಬಂಧುಗಳು. ಇದೊಂದು ಅಪರೂಪದ ಮನ ಮಿಡಿಯುವ ಕಥೆ.
ನಾಲ್ಕು ದಶಕಗಳ ಹಿಂದೆ 20 ವರ್ಷಗಳ ಯುವತಿಯಾಗಿದ್ದ ಈಕೆ ರೈಲ್ವೆ ನಿಲ್ದಾಣದಲ್ಲಿ ಅನಾಥೆಯಾಗಿ ಸಿಕ್ಕಿದ್ದರು. ಅಂದಿನ ಪೆÇಲೀಸ್ ಅಧಿಕಾರಿಯೊಬ್ಬರು ಯಾರೂ ಇಲ್ಲದೇ ಬೀದಿಪಾಲಾಗಿದ್ದ ಮಾತು ಬಾರದ, ಕಿವಿ ಕೇಳದ ಯುವತಿಗೆ ಠಾಣೆಯಲ್ಲಿಯೇ ಆಶ್ರಯವನ್ನು ಸಹ ನೀಡಿದ್ದರು. ಈ ಮಹಿಳೆಗೆ ಪೊಲೀಸರೇ ಇಟ್ಟ ಹೆಸರು ಹೊನ್ನಮ್ಮ. 20ನೇ ವಯಸ್ಸಿನಲ್ಲಿ ಅನಾಥೆಯಾಗಿ ಬೀದಿಪಾಲಾಗಿದ್ದಾಗ ಆಗಿನ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆಯಿಂದ ಬಂದರು ಪೊಲೀಸ್ ಠಾಣೆಯಲ್ಲಿ ಆಶ್ರಯ ನೀಡಿದ್ದರು. ಆರಂಭದಲ್ಲಿ ಈಕೆಗೆ ಚಿಕಿತ್ಸೆ ನೀಡಿ, ಕುಟುಂಬಸ್ಥರ ಪತ್ತೆಗೆ ನಡೆಸಿದ ಪ್ರಯತ್ನ ಸಫಲವಾಗಿಲ್ಲ. ಹಾಗಾಗಿ 40 ವರ್ಷಗಳಿಂದ ಠಾಣೆಯೇ ಮನೆಯಾಗಿದೆ.
ಹೊನ್ನಮ್ಮ ಅವರಿಗೆ ಕಿವಿ ಕೇಳದಿದ್ದರೂ, ಮಾತು ಬರದಿದ್ದರೂ ಚುರುಕಿನ ವ್ಯಕ್ತಿತ್ವ. ಈಕೇಗೆ ಠಾಣೆಯೇ ಸೂರು ಆಗಿದ್ದರೂ, ಠಾಣೆಯನ್ನು ಶುಚಿಗೊಳಿಸುವ, ಪೊಲೀಸರಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ಉಳಿದುಕೊಳ್ಳಲು ಠಾಣೆಯ ಹಿಂಭಾಗದಲ್ಲಿ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿದೆ. ಅಲ್ಲಿಯೇ ಅಡುಗೆ ತಯಾರಿಸಿ, ಕೆಲವೊಮ್ಮೆ ಹೋಟೆಲ್ಗೆ ಹೋಗಿ ಊಟ ಮಾಡುವುದನ್ನು ರೂಢಿಯಾಗಿಸಿಕೊಂಡಿದ್ದಾರೆ.
ಹೊನ್ನಮ್ಮ ಅವರು ಬ್ಯಾಂಕ್ ಖಾತೆ, ಮತದಾರ ಚೀಟಿ, ಆಧಾರ್ ಕಾರ್ಡ್ ಹೊಂದಿದ್ದಾರೆ. ಪೊಲೀಸರೇ ಅವರನ್ನು ಕರೆದೊಯ್ದು ಅಗತ್ಯ ದಾಖಲೆ ಮಾಡಿಸಿಕೊಟ್ಟಿದ್ದಾರೆ. ಎಲ್ಲ ದಾಖಲೆಗಳಲ್ಲಿ ಬಂದರುಪೊಲೀಸ್ ಠಾಣೆಯದ್ದೇ ಕಾಯಂ ವಿಳಾಸ ದಾಖಲಾಗಿದೆ. ವಿಶೇಷ ಸಂದರ್ಭಗಳಲ್ಲಿ ಪೊಲೀಸರು ಆಕೆಗೆ ಹಣ ನೀಡುತ್ತಾರೆ. ಠಾಣೆಯಲ್ಲಿ ಕೆಲಸ ಮಾಡಿದ್ದಕ್ಕೂ ವೇತನ ನೀಡುತ್ತಿದ್ದರು. ದುಂದು ವೆಚ್ಚ ಮಾಡದೆ ಎಲ್ಲವನ್ನೂ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಸರ್ಕಾರದಿಂದ ವೃದ್ಧಾಪ್ಯ ವೇತನ ಸೇರಿದಂತೆ ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.
ಏನೇ ಅಗಲಿ ಪೊಲೀಸರ ಈ ಮಾನವೀಯತೆಗೆ ಶಹಭಾಷ್ ಎನ್ನಲೇಬೇಕು. ಈಗಿನ ಕಾಲದಲ್ಲಿ ಹೆತ್ತ ತಾಯಿ-ತಂದೆಯನ್ನು ನೋಡಿಕೊಳ್ಳದ ಜನರ ಮಧ್ಯೆ ಈ ಪೆÇಲೀಸರು ಅನಾಥೆ ಹೊನ್ನಮ್ಮಳನ್ನು ಹೆತ್ತ ತಾಯಿಗಿಂತ ಹೆಚ್ಚು ಪ್ರೀತಿಸಿ ಚೆನ್ನಾಗಿ ನೋಡಿಕೊಳ್ಳುತ್ತಿರುವುದು ಪೆÇಲೀಸ್ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ.