Breaking News

ಪ್ರಧಾನಿ ಮೋದಿ, ಏಂಜೆಲಾ ಮರ್ಕೆಲ್ ಮಾತುಕತೆ, ಭಾರತ, ಜರ್ಮನಿ ನಡುವೆ ಎಂಟು ಒಪ್ಪಂದಗಳಿಗೆ ಸಹಿ

ಭಯೋತ್ಪಾದನೆ ಚಟುವಟಿಕೆಗಳಿಗೆ ಉತ್ತೇಜನ, ಬೆಂಬಲ ಮತ್ತು ಹಣಕಾಸಿನ ನೆರವು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತ ಮತ್ತು ಜರ್ಮನಿ ನಡುವೆ ಒಮ್ಮತ ಮೂಡಿದೆ.
ಉಭಯ ದೇಶಗಳ ಜಂಟಿ ಕಾರ್ಯನಿರ್ವಹಣೆ ತಂಡಗಳ ಮೂಲಕ ಭಯೋತ್ಪಾದನೆಯನ್ನು ನಿಗ್ರಹಿಸುವ ಸಂಬಂಧ ಕಾರ್ಯತಂತ್ರ ರೂಪಿಸಲು ನಾಲ್ಕನೇ ಭಾರತ ಜರ್ಮನಿ ಅಂತರ ಸರ್ಕಾರ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್ ಜತೆ ವ್ಯಾಪಾರ, ಕೌಶಲ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ, ಭಯೋತ್ಪಾದನೆ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದರು. ಇಬ್ಬರೂ ನಾಯಕರ ನಡುವಿನ ಮಾತುಕತೆ ಫಲಪ್ರದಗೊಂಡಿದ್ದರಿಂದ ಉಭಯ ದೇಶಗಳು ೮ ಒಪ್ಪಂದಗಳಿಗೆ ಸಹಿ ಹಾಕಿವೆ.
ಉಭಯ ದೇಶಗಳ ಆರ್ಥಿಕ ಸಂಬಂಧದಲ್ಲಿ ಅಪಾರ ವೃದ್ಧಿಯಾಗಿದೆ. ಇದರ ಫಲಶ್ರುತಿಯನ್ನು ಸಹ ಕಾಣುತ್ತಿದ್ದೇವೆ. ಹಿಂದಿನ ಬಾರಿ ನವದೆಹಲಿಯಲ್ಲಿ ನಡೆದ ಐಜಿಸಿ ಸಭೆಯಲ್ಲಿ ಜರ್ಮನಿ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಲು ತ್ವರಿತ ವ್ಯವಸ್ಥೆ ಮಾಡಲಾಗಿತ್ತು. ಅದು ಉತ್ತಮ ಫಲಿತಾಂಶ ನೀಡಿದೆ’ ಎಂದರು. ಭಾರತದಲ್ಲಿ ೮೦ ಕೋಟಿ ಯುವಕರಿದ್ದಾರೆ. ದೇಶದ ಶೇಕಡ ೬೫ರಷ್ಟು ಜನಸಂಖ್ಯೆ ೩೫ ವಯಸ್ಸಿಗಿಂತ ಕೆಳಗಿನವರಿದ್ದಾರೆ. ಕೌಶಲ ಅಭಿವೃದ್ಧಿಗಾಗಿ ಜರ್ಮನಿ ನೀಡುವ ಮಾರ್ಗದರ್ಶನ ಈ ಯುವಕರಿಗೆ ನೆರವಾಗಲಿದೆ ಎಂದು ಮೋದಿ ಹೇಳಿದರು.
ಏಂಜೆಲಾ ಮರ್ಕೆಲ್ ಮಾತನಾಡಿ, ಉಭಯ ದೇಶಗಳ ನಡುವೆ ರೂ. ೭೨ ಶತಕೋಟಿ ಮೊತ್ತದಷ್ಟು ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು. ಮೋದಿ ಅವರ ಜತೆ ಜರ್ಮನಿಗೆ ತೆರಳಿರುವ ನಿಯೋಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ ರಾಜು, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಇಂಧನ ಸಚಿವ ಪೀಯೂಷ್ ಗೋಯಲ್, ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ. ಜೆ. ಅಕ್ಬರ್ ಇದ್ದರು. ಸ್ಪೇನ್ಗೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ರಾಷ್ಟ್ರಪತಿ ಫ್ರಾಂಕ್ ವಾಲ್ಟರ್ ಸ್ಟೈನ್ಮಿಯರ್ ಅವರನ್ನು ಭೇಟಿಯಾದರು. ೧೯೮೮ರ ನಂತರ ಭಾರತದ ಪ್ರಧಾನಿಯೊಬ್ಬರು ಸ್ಪೇನ್ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.
ಸೈಬರ್ ನೀತಿ, ಅಭಿವೃದ್ಧಿ ಕ್ರಮಗಳು, ಸುಸ್ಥಿರ ನಗರಾಭಿವೃದ್ಧಿ, ಕೌಶಲ ಅಭಿವೃದ್ಧಿ, ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೆ ಸಹಕಾರ, ರೈಲ್ವೆ ಭದ್ರತೆಯಲ್ಲಿ ಸಹಕಾರ, ವೃತ್ತಿಪರ ತರಬೇತಿಗೆ ಉತ್ತೇಜನ, ಸುಸ್ಥಿರ ಅಭಿವೃದ್ಧಿಗಾಗಿ ಭಾರತ ಜರ್ಮನ್ ಕೇಂದ್ರಗಳ ನಡುವೆ ಸಹಕಾರ ಇವೇ ಸಹಿ ಕಂಡ ಎಂಟು ದ್ವಿಪಕ್ಷೀಯ ಒಪ್ಪಂದಗಳು.

Related posts

Leave a Reply