Header Ads
Header Ads
Breaking News

ಉಜಿರೆ :ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ವರದಿಗಾರಿಕೆ ಕುರಿತಾದ ಕಾರ್ಯಾಗಾರ

ಸದಾ ಹೊಸ ಪ್ರಯೋಗಗಳನ್ನು ನಿರೀಕ್ಷಿಸುವ ಸಮೂಹ ಮಾಧ್ಯಮದ ಅಗತ್ಯಗಳಿಗೆ ತಕ್ಕಂತೆ ವೃತ್ತಿಪರ ಸಾಮರ್ಥ್ಯ ಗಳಿಸಿಕೊಳ್ಳುವುದು ಅವಶ್ಯಕ ಎಂದು ಟಿವಿ ಛಾಯಾಗ್ರಾಹಕ ಯುಗ ದೇವಯ್ಯ ಅಭಿಪ್ರಾಯಪಟ್ಟರು.

ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವರದಿಗಾರಿಕೆ ಕುರಿತಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಾಧ್ಯಮಗಳಲ್ಲಿ ವರದಿಗಾರಿಕೆಯಷ್ಟೇ ಪ್ರಾಮುಖ್ಯತೆಯುಳ್ಳ ಇನ್ನೊಂದು ಕೆಲಸ ಛಾಯಾಗ್ರಹಣ. ಬಹುತೇಕರು ಛಾಯಾಗ್ರಹಣವನ್ನು ಸಾಧಾರಣವಾಗಿ ಪರಿಗಣಿಸುತ್ತಾರೆ. ಛಾಯಾಗ್ರಹಣದ ಸಂದರ್ಭದಲ್ಲಿ ಸುದ್ದಿಗೆ ಇನ್ನೊಂದು ಆಯಾಮವನ್ನು ನೀಡುವ ಕುರಿತಾಗಲಿ ಅಥವಾ ಅದಕ್ಕೆ ಬೇಕಾದ ತಾಂತ್ರಿಕ ಅಂಶಗಳನ್ನಾಗಲಿ ಗಮನಿಸುವುದಿಲ್ಲ. ಇತ್ತೀಚೆಗೆ ಮೊಬೈಲ್ ಕ್ಯಾಮರಾಗಳನ್ನು ಬಳಸುವವರು ಜಾಸ್ತಿಯಾದ ಕಾರಣ ಛಾಯಾಗ್ರಾಹಕರ ಕೆಲಸವನ್ನು ಹಗುರವಾಗಿ ಪರಿಗಣಿಸಿದ್ದಾರೆ. ಇದು ಛಾಯಾಗ್ರಾಹಕರಿಗೆ ಸವಾಲಿನ ಕೆಲಸ ಎಂದರು.

ಖಾಸಗಿ ಸುದ್ದಿ ವಾಹಿನಿಯ ಅಪರಾಧ ಸುದ್ದಿ ವಿಭಾಗದ ಮುಖ್ಯಸ್ಥ ಸುನೀಲ್ ಧರ್ಮಸ್ಥಳ ಮಾತನಾಡಿ ಪತ್ರಿಕೋದ್ಯಮಕ್ಕೆ ಸೇರ ಬಯಸುವವರಿಗೆ ಇರುವ ಅವಕಾಶಗಳ ವಿವರ ನೀಡಿದರು. ವರದಿಗಾರಿಕೆ, ಬರವಣಿಗೆ, ಹಿನ್ನೆಲೆ ಧ್ವನಿ, ಕಾರ್ಯಕ್ರಮ ನಿರ್ಮಾಣ ಹೀಗೆ ಬೇರೆ ಬೇರೆ ರೀತಿಯ ಕಾರ್ಯಗಳಿರುತ್ತವೆ. ಆದರೆ ಹೊಸದಾಗಿ ಸೇರುವವರು ಯಾವುದೇ ಒಂದು ಕೆಲಸದಲ್ಲಿ ಮಾತ್ರ ಪರಿಣತಿ ಹೊಂದಿ ಅದರಲ್ಲೇ ಉಳಿದುಕೊಳ್ಳುತ್ತೇನೆ ಎಂದು ಭಾವಿಸಿದರೆ ಅದು ಕಷ್ಟವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪತ್ರಿಕೋದ್ಯಮಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಕಲಿಯುವುದು ಒಳ್ಳೆಯದು ಎಂದರು.
ಖಾಸಗಿ ಟಿವಿ ವಾಹಿನಿಯ ಕ್ರೀಡಾ ಸುದ್ದಿ ವಿಭಾಗದ ಮುಖ್ಯಸ್ಥ ದಾಮೋದರ್ ದೊಂಡೋಲೆ ಮಾತನಾಡಿ ಪತ್ರಕರ್ತರು ತಮ್ಮದೇ ವಿಭಿನ್ನ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದರು. ಅನುಕರಣೆ ರೂಢಿಸಿಕೊಂಡರೆ ಸ್ವಂತ ಅಸ್ತಿತ್ವ ಕಂಡುಕೊಳ್ಳುವುದು ಕಷ್ಟ. ಆದ್ದರಿಂದ ಪ್ರತಿಯೊಬ್ಬರೂ ತನ್ನೊಳಗಿನ ಸಾಮರ್ಥ್ಯ ಅರಿಯಬೇಕು ಎಂದು ಸಲಹೆ ನೀಡಿದರು.

ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವರದಿಗಾರಿಕೆ ಹಾಗೂ ಸುದ್ದಿ ಬರೆಯುವ ಶೈಲಿಯ ಕುರಿತು ತರಬೇತಿ ನೀಡಲಾಯಿತು. ಜೊತೆಗೆ ತಮ್ಮ ಕಾರ್ಯಾವಧಿಯಲ್ಲಿ ಅನುಭವಕ್ಕೆ ಬಂದ ವಿಭಿನ್ನ ಘಟನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ್ ಹೆಗಡೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *