Header Ads
Breaking News

ಪ್ರಶಸ್ತಿಗಿಂತ ಸಂತೃಪ್ತಿ ದೊಡ್ಡ ಗೌರವ – ಡಾ. ಮಾಧವ ಎಂ.ಆರ್.

ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ.
ಉಜಿರೆ: ವಿದ್ಯಾರ್ಥಿ ದೆಸೆಯಲ್ಲೇ ಸಮಾಜದ ಏಳ್ಗೆಗಾಗಿ ನಿಸ್ವಾರ್ಥ ಮನೋಭಾವದಿಂದ ಸೇವೆಯಲ್ಲಿ ತೊಡಗಿಸುವ ಅವಕಾಶವನ್ನು ಎನ್‌ಎಸ್‌ಎಸ್ ನೀಡುತ್ತದೆ. ಯಾವುದೇ ಕೆಲಸವನ್ನು ಹೊರೆಯೆಂದು ಭಾವಿಸದೆ ಸಂಪೂರ್ಣವಾಗಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಸ್ವಯಂಸೇವಕರಲ್ಲಿ ಮೂಡುತ್ತದೆ. ಅದು ಅವರಲ್ಲಿ  ಉತ್ತಮ ಸಂಸ್ಕಾರ, ಅವಕಾಶ ಹಾಗೂ ಸಾಧಿಸುವ ತುಡಿತವನ್ನು ಹುಟ್ಟುಹಾಕುತ್ತದೆ. ಭೌತಿಕ ಲಾಭಕ್ಕಿಂತ ಆಂತರ್ಯದ ಅನುಭೂತಿಗೆ ಬೆಲೆ ಕಟ್ಟಲಾಗದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಾಧವ್ ಎಂ.ಆರ್. ಹೇಳಿದರು.
      ಇವರು ಉಜಿರೆಯ ಶ್ರೀ ಧ.ಮಂ. ಪದವಿ ಕಾಲೇಜಿನ ರಾ.ಸೇ.ಯೋ. ಘಟಕವು ಆನ್‌ಲೈನ್ ಮಾಧ್ಯಮದ ಮೂಲಕ ಆಯೋಜಿಸಿದ್ದ  2020- 21ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. 
      
ಅಂಕ ಗಳಿಕೆಯ ಮಾರ್ಗದಲ್ಲಿ ಪಠ್ಯೇತರ ಚಟುವಟಿಕೆಗಳು ಹೊರೆಯಾಗುತ್ತದೆ ಎಂಬ ಭಾವನೆ ಇದೆ. ಆದರೆ ಅದು ನಿಜವಲ್ಲ, ಅವು ಅಧ್ಯಯನವನ್ನು ಇನ್ನಷ್ಟು ವೃದ್ಧಿಗೊಳಿಸಿ, ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ನಾವು ಮಾಡುವ ಸೇವೆಗೆ ಪ್ರಶಸ್ತಿಗಿಂತ ಸಂತೃಪ್ತಿಯೇ ದೊಡ್ಡ ಗೌರವ. ಬಿಸಿ ರಕ್ತದ ಈ ಯೌವನವೇ ನಮ್ಮ ದೇಶಕ್ಕಾಗಿ ಕೈಲಾದ ಕೊಡುಗೆ ನೀಡಲು ಸೂಕ್ತ ಸಮಯ ಎಂದು ನುಡಿದು ನೂತನ ಸ್ವಯಂಸೇವಕರಿಗೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಸತೀಶ್ಚಂದ್ರ ಮಾತನಾಡಿ “ಕೊರೋನಾದಿಂದ ಕಾಲೇಜಿನ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಶೈಕ್ಷಣಿಕ ರಂಗಕ್ಕೆ ದೊಡ್ಡ ಸವಾಲಾಗಿತ್ತು. ಆದರೆ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ. ನಮ್ಮ ಸ್ವಯಂಸೇವಕರು ತಂತ್ರಜ್ಞಾನವನ್ನು ಮಾಧ್ಯಮವಾಗಿಟ್ಟುಕೊಂಡು ಮಾಡಿದ ಸಮಾಜಸ್ನೇಹಿ ಕಾರ್ಯಗಳು ಇದಕ್ಕೆ ಸಾಕ್ಷಿ. ಪುಸ್ತಕ ಜ್ಞಾನದ ಜೊತೆ ಜೀವನ ಪಾಠ ಕಲಿಸುವುದರಲ್ಲಿ ಎನ್‌ಎಸ್‌ಎಸ್ ಮಹತ್ತರವಾದ ಪಾತ್ರ ನಿರ್ವಹಿಸುತ್ತದೆ.” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಕಾರ್ಯದರ್ಶಿಗಳಿಂದ ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿಗಳಿಗೆ ಕಡತಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ. ಕೆ.ಎಸ್ ಲಕ್ಷ್ಮೀನಾರಾಯಣ್, ದೀಪಾ.ಆರ್.ಪಿ ಮತ್ತು ಹಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು.
ಸ್ವಯಂಸೇವಕಿ ಅಂಕಿತಾ ನಿರೂಪಿಸಿದರು.
ವರದಿ: ಇಂಚರಾ 
           ದ್ವಿತೀಯ ಪತ್ರಿಕೋದ್ಯಮ ವಿಭಾಗ 
           ಎಸ್‌ಡಿಎಂ ಕಾಲೇಜು ಉಜಿರೆ.
 
 
 

Related posts

Leave a Reply

Your email address will not be published. Required fields are marked *