Header Ads
Header Ads
Breaking News

ಫರಂಗಿಪೇಟೆಯ ತಾತ್ಕಾಲಿಕ ಮೀನು ಮಾರುಕಟ್ಟೆ ಉದ್ಘಾಟನೆ

ಬಂಟ್ವಾಳ: ಫರಂಗಿಪೇಟೆಯ ರಾಷ್ಟ್ರೀಯ ಹೆದ್ದಾರಿಯ ಸಮೀಪ ಸುಸಜ್ಜಿತವಾದ ತಾತ್ಕಾಲಿಕ ಮೀನು ಮಾರುಕಟ್ಟೆಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಅವರು ನಿನ್ನೆ ಸಂಜೆ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಾರುಕಟ್ಟೆಯು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಕಾರ್ಯಾಚರಿಸುತ್ತಿರುವುದರಿಂದ ಯಾವುದೇ ತೊಂದರೆಯಾಗದಂತೆ ವಹಿವಾಟು ನಡೆಸಬೇಕು. ಹೆದ್ದಾರಿ ಕೊಂಚ ದೂರದಲ್ಲಿ ಬ್ಯಾರಿಕೇಡ್ ಅಳವಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹೆದ್ದಾರಿಯಲ್ಲಿಯೇ ವಾಹನವನ್ನು ನಿಲ್ಲಿಸಲು ವ್ಯಾಪಾರಸ್ಥರು ಅನುವು ಮಾಡಿಕೊಡಬಾರದು. ಇದರಿಂದ ಅಪಘಾತ ಹಾಗೂ ಸಂಚಾರಕ್ಕೆ ತೊಡಕು ಉಂಟಾಗುವ ಸಾಧ್ಯತೆ ಇದೆ. ಇರುವ ದಿನಗಳಷ್ಟು ಈ ಪರಿಸರದಲ್ಲಿ ಸ್ವಚ್ಛತೆಯಿಂದ ವ್ಯಾಪಾರ ನಡೆಸಿ ಎಂದು ಶುಭಹಾರೈಸಿದರು.

ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಮಾತನಾಡಿ, ಫರಂಗಿಪೇಟೆ ಮಾರುಕಟ್ಟೆ ಜಿಲ್ಲೆಯಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಮಂಗಳೂರಿನ ಬಂದರ್ ಪ್ರದೇಶ ಬಿಟ್ಟರೆ ಎರಡನೇಯದಾಗಿ ಫರಂಗಿಪೇಟೆಯಲ್ಲಿ ತಾಜಾ ಮೀನುಗಳು ಸಿಗುತ್ತದೆ. ಪರಂಪರಗತವಾಗಿ ಬಂದಿರುವ ಈ ಮಾರುಕಟ್ಟೆ ಉಳಿಸುವ ಕೆಲಸವಾಗಬೇಕಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತೀ ಅಗತ್ಯ. ಶಾಶ್ವತ ಮಾರುಕಟ್ಟೆ ನಿರ್ಮಾಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಒತ್ತಾಯ ಮಾಡಲಾಗುವುದು ಎಂದರು.

ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಸುಮಾರು 15 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶಕ್ಕೆ ಶಾಶ್ವತ ಮೀನು ಮಾರುಕಟ್ಟೆ ಅಗತ್ಯವಾಗಿ ಬೇಕಾಗಿದೆ. ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ, ಸೂಕ್ತವಾದ ಸರಕಾರಿ ಜಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಹೇಳಿದರು.

ಮಾಜಿ ಮೇಯರ್ ಅಶ್ರಫ್ ಕೆ., ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ ಈ ಸಂದರ್ಭ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಲಿಡಿಯೋ ಪಿಂಟೋ, ಮಾಜಿ ತಾಪಂ ಸದಸ್ಯ ಆಸಿಫ್ ಇಕ್ಬಾಲ್ ಸಿ.ಎಂ. ಮುಸ್ತಫಾ, ಬುಖಾರಿ, ಉಮರಬ್ಬ, ಮಜೀದ್, ರಫೀಕ್ ಪೆರಿಮಾರ್, ಜಾಹಿರ್ ಅಬ್ಬಾಸ್, ಆದಂ, ಸುಲೈಮಾನ್, ಇಕ್ಬಾಲ್ ಸುಜೀರ್, ಖತೀಬ್ ಉಸ್ಮಾನ್ ದಾರಿಮಿ, ರಿಯಾಝ್ ಕುಂಪನಮಜಲು, ಹನೀಫ್ ಹಾಜರಿದ್ದರು.

Related posts

Leave a Reply