Breaking News

ಫಲ್ಗುಣಿ ನದಿಗೆ ಕಾರಖಾನೆಗಳ ರಾಸಾಯನಿಕ ನೀರು, ಆತಂಕದಲ್ಲಿ ನೀರು ಕುಡಿಯುತ್ತಿರುವ ಹಳ್ಳಿಗರು


ಮರವೂರು ಬಹುಗ್ರಾಮ ಕುಡಿಯವ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಬಜ್ಪೆಯ ಮರವೂರು ಅಣೆಕಟ್ಟಿನ ನೀರಿಗೆ ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಮಿಶ್ರಣಗೊಂಡು ಕುಡಿಯಲು ಅಯೋಗ್ಯವಾಗಿದೆ. ಇದರಿಂದ ನೀರಿನ ಬಣ್ಣ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ರಾಸಾಯನಿಕ ಮಿಶ್ರಣಗೊಂಡಿರುವುದು ಕಂಡುಬಂದಿದೆ. ಸಾವಿರಾರು ಜಲಚರಗಳು ಸತ್ತುಬಿದ್ದಿದ್ದು, ಹಲವು ಜಾನುವಾರುಗಳ ಜೀವವೂ ಹರಣವಾಗಿದೆ.
ಬಜ್ಪೆ ಸಮೀಪದ ಮರವೂರಿನಲ್ಲಿನ ಫಲ್ಗುಣಿ ನದಿಗೆ ಅಡ್ಡಲಾಗಿ ಸುಮಾರು ೫೫ ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಕಟ್ಟಿದ್ದು, ಕಳೆದ ಎಪ್ರಿಲ್ ೧೮ರಂದು ಉದ್ಘಾಟನೆಗೊಂಡಿತ್ತು. ಶಾಸಕ ಅಭಯ ಚಂದ್ರ ಜೈನ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕೇಂದ್ರ ಮಾಜಿ ಸಚಿವ ಆಸ್ಕರ್ ಫೆರ್ನಾಂಡೀಸ್, ಸಂಸದ ನಳಿನ್ ಕುಮಾರ್ ಕಟೀಲ್ ಮುಂತಾದವರು ಆಗಮಿಸಿ ಉದ್ಘಾಟಿಸಿ ತೆರಳಿದ್ದರು. ಬಜ್ಪೆ, ಸೂರಿಂಜೆ, ಮರವೂರು, ಮಳವೂರು ಮುಂತಾದ ಕಡೆ ಇದೇ ಅಣೆಕಟ್ಟಿನಿಂದ ನೀರು ಶುದ್ಧೀಕರಣಗೊಂಡು ರವಾನಿಸಲಾಗುತ್ತಿತ್ತು. ಆದರೆ ಉದ್ಘಾಟನೆಗೊಂಡು ಒಂದು ತಿಂಗಳಾಗುವಷ್ಟರಲ್ಲಿ ನದಿಗೆ ಕೈಗಾರಿಕೆಗಳು ಸೂಸುವ ವಿಷಪೂರಿತ ರಾಸಾಯನಿಕ ಮಿಶ್ರಣಗೊಂಡು ನೀರು ಕಲುಷಿತಗೊಂಡಿದ್ದು, ಕುಡಿಯಲು ಸಂಪೂರ್ಣವಾಗಿ ಅಯೋಗ್ಯವಾಗಿದೆ.
ಕೈಗಾರಿಕಾ ಕಂಪೆನಿಗಳು ತಮ್ಮ ತ್ಯಾಜ್ಯ ನೀರನ್ನು ಫಲ್ಗುಣಿ ನದಿಗೆ ಹರಿಯಬಿಟ್ಟ ಪರಿಣಾಮ ಅದೆಲ್ಲಾ ಶೇಖರಣೆಗೊಂಡು ಅದೇ ನೀರು ಜನರಿಗೆ ಕುಡಿಯಲು ಬಳಕೆಯಾಗುವಂತಾಗಿದೆ. ನೀರು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ರಾಸಾಯನಿಕವೆಲ್ಲಾ ನೀರಿ ನೀರಿನ ಬಣ್ಣ ಬದಲಾಗಿದೆ. ಇದರಿಂದಾಗಿ ನೀರಲ್ಲಿದ್ದ ಜಲಚರಗಳೆಲ್ಲಾ ಸತ್ತುಬಿದ್ದಿದೆ. ಮೀನು, ಏಡಿ, ಆಮೆ ಮುಂತಾದ ಜಲಚರಗಳ ಮೃತದೇಹಗಳು ನೀರಲ್ಲಿ ತೇಲುತ್ತಿದ್ದು, ಅಣೆಕಟ್ಟಿನ ಸಮೀಪ ರಾಶಿ ಬಿದ್ದಿದೆ. ಇದರಿಂದಾಗಿ ನೀರೆಲ್ಲಾ ವಾಸನೆಯುಕ್ತವಾಗಿದ್ದು, ಪ್ರದೇಶದಲ್ಲಿ ಕೆಟ್ಟ ವಾಸನೆ ಪಸರಿದೆ. ನದಿಯ ನೀರಿಗೆ ಕೈಗಾರಿಕೆಗಳ ಕಲುಷಿತ ನೀರು ಮಿಶ್ರಣಗೊಂಡು ಈ ರೀತಿ ಆಗಲು ಕಾರಣ ಎಂದು ತಿಳಿದುಬಂದಿದೆ. ಸುರತ್ಕಲ್, ಬೈಕಂಪಾಡಿಯಲ್ಲಿನ ಹಲವು ಕಂಪನಿಗಳು, ಸೆಝ್‌ನಿಂದ ಹೊರಬರುವ ನೀರನ್ನು ನೇರವಾಗಿ ನದಿಗೆ ಹರಿಯಬಿಡಲಾಗುತ್ತಿದೆ. ಅಲ್ಲದೆ ಜೋಕಟ್ಟೆ ಸಮೀಪದ ತೋಡಿನ ಮುಖಾಂತರ ಸಾಕಷ್ಟು ಕಲುಷಿಷತ ನೀರು ನೇರವಾಗಿ ನದಿಗೆ ಹರಿದುಬರುತ್ತಿದ್ದು ಅದರಿಂದಾಗಿ ನೀರು ಕಲುಷಿತಗೊಳ್ಳುತ್ತಿದೆ. ಇದೇ ರೀತಿ ನಡೆದರೆ ನೀರು ಸಂಪೂರ್ಣವಾಗಿ ನೀರು ಕಲುಷಿತಗೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣವಾಗಿ ನೀರಿಗೆ ಮಾಡಿದ ಹೋಮದಂತಾಗುತ್ತದೆ.
ಮಳೆ ಬಂದು ನೀರು ಉಕ್ಕಿದರೆ ಕುಡಿಯವ ನೀರಿಗೆ ಆರಾಮವಾಗಿ ಸೇರಿಬಿಡಬಹುದು. ಅಲ್ಲದೆ ಒಸರಿನ ಮುಖಾಂತರ ಈಗಾಗಲೇ ನೀರಿಗೆ ಸೇರುವ ಸಾಧ್ಯತೆ ಇದ್ದು, ಇಲಾಖೆ ಈ ಬಗ್ಗೆ ತುರ್ತಾಗಿ ಗಮನಹರಿಸಬೇಕೆನ್ನುವ ಒತ್ತಾಯ ಕೇಳಿಬಂದಿದೆ. ನೀರು ಸಾಕಷ್ಟು ಕಲುಷಿತಗೊಂಡಿದ್ದರೂ ಮತ್ತೆ ಪೂರೈಕೆ ಮಾಡುವುದರಿಂದ ಆತಂಕಕ್ಕೆ ಕಾರಣವಾಗಿದೆ. ನೀರು ಕಲುಷಿತಗೊಂಡಿರುವ ಬಗ್ಗೆ ಈಗಾಗಲೇ ಹಲವು ಇಲಾಖೆಗಳಿಗೆ ದೂರು ನೀಡಲಾಗಿದೆ ಎಂದು ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಅರ್ಬಿ ತಿಳಿಸಿದ್ದಾರೆ. ತಹಶೀಲ್ದಾರ್, ಜಿಲ್ಲಾಧಿಕಾರಿ, ಪರಿಸರ ಇಲಾಖೆ ಅಲ್ಲದೆ ಮಹಾನಗರ ಪಾಲಿಕೆಗೆ ಈಗಾಗಲೇ ದೂರು ನೀಡಲಾಗಿದ್ದು, ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ನೀರಿನ ಮಾದರಿಯನ್ನು ಮಂಗಳೂರು ಹಾಗೂ ಸುರತ್ಕಲ್‌ನ ಪ್ರಯೋಗಾಲಕ್ಕೆ ರವಾನಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಯಾವ ರಾಸಾಯನಿಕ ನೀರಲ್ಲಿ ಮಿಶ್ರಣಗೊಂಡಿದೆ, ಇದರಿಂದ ಆಗುವ ಅಪಾಯ ಇತ್ಯಾದಿಗಳ ಬಗ್ಗೆ ತಿಳಿದು ವರದಿ ತಯಾರಿಸಿ ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುತ್ತದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.

Related posts

Leave a Reply