Header Ads
Header Ads
Breaking News

ಫೀಬಾ ಮಹಿಳಾ ಏಶಿಯಾ ಕಪ್ ಬಾಸ್ಕೆಟ್‌ಬಾಲ್, ಮೊದಲ ಬಾರಿಗೆ ಚಾಂಪಿಯನ್ ಆದ ಭಾರತ ಎ ಡಿವಿಜನ್‌ಗೆ ಬಡ್ತಿ

ಶಿರೀನ್ ಲಿಮಯೆ ಮತ್ತು ಜೀನಾ ಸ್ಕರಿಯ ಅವರ ಅತ್ಯುತ್ತಮ ಆಟದ ನೆರವಿನಿಂದ ಭಾರತ ತಂಡದವರು ಬೆಂಗಳೂರಿನಲ್ಲಿ ನಡೆದ ಭಾರತ ಬ್ಯಾಸ್ಕೆಟ್ಬಾಲ್ ಫೆಡರೇಷನ್ ಆಶ್ರಯದ ಫೀಬಾ ಮಹಿಳಾ ಏಷ್ಯಾ ಕಪ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಬಿ ಡಿವಿಷನ್ ಪ್ರಶಸ್ತಿ ಗೆದ್ದುಕೊಂಡರಲ್ಲದೆ, ಎ ಡಿವಿಷನ್ಗೆ ಬಡ್ತಿ ಪಡೆದರು.
ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಆತಿಥೇಯ ತಂಡದ ಅಭಿಮಾನಿಗಳಿಗೆ ನಿರಾಸೆ ಉಂಟಾಗಲಿಲ್ಲ. ಆರಂಭದಿಂದಲೂ ರೋಚಕ ಹಣಾಹಣಿ ಕಂಡು ಬಂದ ಪಂದ್ಯದಲ್ಲಿ ವಿಜಯೀ ತಂಡ ಕೊನೆಯ ಕ್ಷಣಗಳಲ್ಲಿ ಮುನ್ನಡೆ ಸಾಧಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಮೊದಲ ಕ್ವಾರ್ಟರ್ನಲ್ಲಿ ೧೬-೧೯ರಿಂದ ಹಿಂದಿದ್ದ ಭಾರತ, ಎರಡನೇ ಮತ್ತು ಮೂರನೇ ಕ್ವಾರ್ಟರ್ಗಳಲ್ಲಿಯೂ ೩೧-೩೯ ಮತ್ತು ೫೦-೫೮ರಿಂದ ಹಿಂದಿತ್ತು. ಆದರೆ ಕೊನೆಯ ಕ್ವಾರ್ಟರ್ ಮುಗಿದಾಗ ೭೫-೭೩ ಪಾಯಿಂಟ್ಸ್ ಜಯದ ಸಂಭ್ರಮದಿಂದ ಭಾರತದ ಆಟಗಾರ್ತಿಯರು ಕುಣಿದು ಕುಪ್ಪಳಿಸಿದರು. ಕೊನೆಯ ಕ್ವಾರ್ಟರ್ನ ಹಣಾಹಣಿ ಶುರುವಾದಾಗ ಕಜಕಿಸ್ತಾನದ ಆಟಗಾರ್ತಿಯರು ಎಂಟು ಪಾಯಿಂಟ್ಗಳಿಂದ ಮುಂದಿದ್ದರು. ಮೊದಲ ನಿಮಿಷದಲ್ಲಿಯೇ ತಂಡದ ನಾಯಕಿ ಅನಿತಾ ಪಾಲ್ ೩ ಪಾಯಿಂಟ್ಸ್ ಗಳಿಸಿ ಭಾರತದ ವನಿತೆಯರಲ್ಲಿ ಆತ್ಮವಿಶ್ವಾಸ ತುಂಬಿದರು. ಅನಂತರ ರಸ್ಪ್ರೀತ್ ಸಿಧು ಮತ್ತು ಮರ್ಲಿನ್ ಸ್ಕರಿಯ ತಲಾ ೩ ಪಾಯಿಂಟ್ಸ್ ಗಳಿಸಿದರು. ಆಗ ಭಾರತಕ್ಕೆ ೬೧-೬೦ರ ಮುನ್ನಡೆ ಸಿಕ್ಕಿತು. ಪಂದ್ಯ ರೋಚಕ ತಿರುವು ಕಂಡುಕೊಂಡಿತು.
ಸ್ಕೋರು ೬೩-೬೩, ೬೬-೬೬, ೭೧-೭೧ರಲ್ಲಿ ಸಮಗೊಂಡಿತ್ತು. ಆಟ ಮುಗಿಯಲು ಕೇವಲ ೩೦ ಸೆಕೆಂಡುಗಳಿದ್ದವು. ಆಗ ಶಿರೀನ್ ಲಿಮಯೆ ೨ ಪಾಯಿಂಟ್ಸ್ ತಂದಿತ್ತರು. ಮರುಕ್ಷಣದಲ್ಲೇ ಕಜಕ್ ೨ ಪಾಯಿಂಟ್ಸ್ ಗಳಿಸಿತು. ಸ್ಕೋರು ೭೩-೭೩ರಲ್ಲಿ ಸಮಗೊಂಡಿತು. ಕೊನೆಯ ಕ್ಷಣಗಳಲ್ಲಿ ಚೆಂಡನ್ನು ಬುಟ್ಟಿಗೆ ಹಾಕುವಲ್ಲಿ ಕೊಂಡ್ರಕೊವಾ ಎಡವಿದರು. ತಕ್ಷಣ ಕಜಕ್ ಆವರಣದತ್ತ ನುಗ್ಗಿದ ಅನಿತಾ ಚೆಂಡನ್ನು ರಸ್ಪ್ರೀತ್ ಅವರತ್ತ ಎಸೆದರು. ರಸ್ಪ್ರೀತ್ ಆಯಕಟ್ಟಿನ ಸ್ಥಳದಲ್ಲಿ ನಿಂತಿದ್ದ ಶಿರೀನ್ ಅವರತ್ತ ಚೆಂಡನ್ನು ಎಸೆದರು. ಶಿರೀನ್ ಎಡವಲಿಲ್ಲ. ಚೆಂಡು ಬುಟ್ಟಿಗೆ ಬಿತ್ತು. ಭಾರತದ ಪಾಳಯದಲ್ಲಿ ಸಂಭ್ರಮದ ಅಲೆ ಎದ್ದಿತು. ಇದೀಗ ಏಷ್ಯಾ ಗುಂಪಿನಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ತಂಡಗಳೂ ಸೇರಿವೆ. ನೂತನ ನಿಯಮದನಂತರ ಭಾರತದ ಅತ್ಯುತ್ತಮ ಸಾಧನೆ ಇದಾಗಿದೆ.
ಎ ಡಿವಿಷನ್ ಪ್ರಶಸ್ತಿಗಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಜಪಾನ್ ಆಟಗಾರ್ತಿಯರು ೭೨-೭೧ರಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರು.

Related posts

Leave a Reply