

ಮೂಡುಬಿದಿರೆ : “ಕೋಟಿ-ಚೆನ್ನಯ” ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ “ವೀರರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮ”ದ ಕೋಟಿ-ಚೆನ್ನಯ ಜೋಡುಕರೆಯಲ್ಲಿ 18ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವವು ಫೆ.20ರಂದು ನಡೆಯಲಿದೆ ಎಂದು ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಅವರು ಕಡಲಕೆರೆಯ ಬಳಿ ಇರುವ ಕಂಬಳ ಕರೆಯ ಆವರಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು. ತುಳುನಾಡಿನ ಮೂರು ಜಿಲ್ಲೆಗಳಲ್ಲಿ ನಡೆಯುವ ಜಾನಪದ ಕ್ರೀಡೆಯಾಗಿರುವ, ಕಂಬಳವು ಅತೀ ವಿಜೃಂಭಣೆ ಮತ್ತು ಶಿಸ್ತಿನಿಂದ ಮೂಡುಬಿದಿರೆಯಲ್ಲಿ ಸರಕಾರ ಜಾಗದಲ್ಲಿ ನಡೆಯುವ ಕಂಬಳವಾಗಿದ್ದು ಈ ಬಾರಿ ಒಂದೇ ದಿನದಲ್ಲಿ ಮುಗಿಸುವ ಯೋಚನೆ ಇದೆ. ಚೌಟರ ಅರಮನೆಯ ಕುಲದೀಪ್ ಎಂ. ಅವರ ಅಧ್ಯಕ್ಷತೆಯಲ್ಲಿ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೆಸರ ವೇ/ಮೂ/ ಈಶ್ವರ ಭಟ್, ಆಲಂಗಾರು ಚರ್ಚಿನ ಧರ್ಮಗುರು ವಾಲ್ಟರ್ ಡಿ”ಸೋಜಾ, ಪುತ್ತಿಗೆ ನೂರಾನಿ ಮಸ್ಜೀದ್ನ ಮೌಲಾನ ಝಿಯಾವುಲ್ಲ ಹಾಗೂ ಸುಧೀರ್ ಹೆಗ್ಡೆ ಕುಂಟಾಡಿ ಅವರು ಬೆಳಿಗ್ಗೆ 7 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಕಳೆದ ಬಾರಿಯ ಕಂಬಳದ ಸಂದರ್ಭದಲ್ಲಿ 35-40 ಲಕ್ಷ ರೂ ವೆಚ್ಚದಲ್ಲಿ ಗುತ್ತಿನ ಮನೆಯ ಮಾದರಿ ಶಾಶ್ವತ ವೇದಿಕೆಯನ್ನು ನಿರ್ಮಾಣ ಮಾಡಬೇಕೆನ್ನುವ ಯೋಜನೆ ಹಾಕಿಕೊಳ್ಳಲಾಗಿತ್ತು ಆದರೆ ಕೊರೋನಾ ಕಾರಣದಿಂದಾಗಿ ಕಾರ್ಯಗತವಾಗಿಲ್ಲ. ಇದೀಗ ಎಂಆರ್ಪಿಎಲ್ ಸಂಸ್ಥೆಯು 35ಲಕ್ಷ ರೂವನ್ನು ಬಿಡುಗಡೆಗೊಳಿಸಿದ್ದು ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ರಿತೇಶ್ ಮತ್ತು ಅಥಿಕಾರಿಗಳ ನೇತೃತ್ವದಲ್ಲಿ ಕಂಬಳದ ದಿನವೇ ಭೂಮಿ ಪೂಜೆ ನಡೆಯಲಿದೆ ಹಾಗೂ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಸಚಿವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು ಈ ಬಾರಿಯ ಕಂಬಳದಲ್ಲಿ 175ಕ್ಕಿಂತ 200 ಜತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಮಿತಿಯ ಕೋಶಾಧಿಕಾರಿ ಭಾಸ್ಕರ್ ಕೋಟ್ಯಾನ್, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ವಾರ್ಡ್ ಸದಸ್ಯ ನಾಗರಾಜ ಪೂಜಾರಿ, ಜಿ.ಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲ್, ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ನ್ಯಾಯವಾದಿ ಸುರೇಶ್ ಕೆ.ಪೂಜಾರಿ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.