Header Ads
Header Ads
Breaking News

ಫ್ರೆಂಚ್ ಓಪನ್ ಟೆನ್ನಿಸ್, ನಡಾಲ್, ಜೆಲೆನಾ ದಾಖಲೆ ಚಾಂಪಿಯನ್ನರು

ಗೆಲ್ಲುವ ಕುದುರೆಗೆ ಕಡಿವಾಣ ಹಾಕಲು ಎದುರಾಳಿಗೆ ಸಾಧ್ಯವಾಗಲಿಲ್ಲ. ಸ್ವಿಟ್ಜರ್ಲೆಂಡ್ನ ಸ್ಟಾನಿ ಸ್ಲಾನ್ ವಾವ್ರಿಂಕಾ ಅವರ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತ ಸ್ಪೇನ್ನ ರಫೆಲ್ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಪ್ರಶಸ್ತಿ ಮುಡಿಗೇರಿಸಿಕೊಂಡರು.
ರೊಲ್ಯಾಂಡ್ ಗ್ಯಾರೋಸ್ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು ೬-೨, ೬-೩, ೬-೧ರಿಂದ ಜಯ ಸಾಧಿಸಿದರು. ಈ ಮೂಲಕ ಟೂರ್ನಿಯಲ್ಲಿ ಹತ್ತು ಬಾರಿ ಪ್ರಶಸ್ತಿಗಳನ್ನು ಗೆದ್ದ ದಾಖಲೆ ತಮ್ಮದಾಗಿಸಿಕೊಂಡರು. ೧೫ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಗ್ಗಳಿಕೆಯೂ ಅವರದಾಯಿತು. ಮೊಣಕಾಲಿನ ಗಾಯದಿಂದ ೨೦೧೨ ಮತ್ತು ೨೦೧೩ರ ಅವಧಿಯಲ್ಲಿ ಏಳು ತಿಂಗಳು ಅಂಗಳಕ್ಕೆ ಇಳಿಯಲು ಸಾಧ್ಯವಾಗದ ನಡಾಲ್ ೨೦೧೪ರಲ್ಲಿ ಕೊನೆಯದಾಗಿ ಫ್ರೆಂಚ್ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದಿದ್ದರು. ಈ ಬಾರಿಯ ಟೂರ್ನಿಯ ಉದ್ದಕ್ಕೂ ಒಂದೇ ಒಂದು ಸೆಟ್ ಕೂಡ ಸೋಲದೆ ಫೈನಲ್ ಪ್ರವೇಶಿಸಿದ ಅವರು ಅಂತಿಮ ಹಣಾಹಣಿಯಲ್ಲೂ ಪಾರಮ್ಯ ಮೆರೆದರು. ವಿಶ್ವದ ಒಂದನೇ ನಂಬರ್ ಆಟಗಾರ ಆ್ಯಂಡಿ ಮರೆ ಅವರನ್ನು ಸೆಮಿಫೈನಲ್ನಲ್ಲಿ ಮಣಿಸಿದ್ದ ೨೦೧೫ರ ಚಾಂಪಿಯನ್ ವಾವ್ರಿಂಕಾ ಭರವಸೆಯಿಂದಲೇ ನಡಾಲ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದರು. ಆದರೆ ಮಣ್ಣಿನ ಅಂಕಣದ ರಾಜ ಎಂದೇ ಹೆಸರಾಗಿರುವ ಸ್ಪೇನ್ ಆಟಗಾರನ ಮುಂದೆ ಅವರು ಸಂಪೂರ್ಣ ಧೃತಿಗೆಟ್ಟರು. ಮೊದಲ ಸೆಟ್ನಿಂದಲೇ ಪಂದ್ಯದ ಮೇಲೆ ಆಧಿಪತ್ಯ ಸ್ಥಾಪಿಸಿದ ನಡಾಲ್ ಯಾವ ಹಂತದಲ್ಲೂ ಎದುರಾಳಿಗೆ ಅವಕಾಶ ನೀಡಲಿಲ್ಲ. ಅಂತಿಮ ಪಾಯಿಂಟ್ ಗಳಿಸುತ್ತಿದ್ದಂತೆ ಅಂಗಣದಲ್ಲಿ ಅಂಗಾತ ಮಲಗಿ ಸಂಭ್ರಮಿಸಿದರು. ಮಾತನಾಡಿ ಈ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳಿ ಭಾವುಕರಾದರು. ರಾಫೆಲ್, ನನಗೇನೂ ಹೇಳಲಾಗುತ್ತಿಲ್ಲ. ನೀನು?ಶ್ರೇಷ್ಠ ಆಟಗಾರ ಎಂದು ವಾವ್ರಿಂಕ ಅಭಿನಂದಿಸಿದರು. ೩೧ ವರ್ಷ ವಯಸ್ಸಿನ ನಡಾಲ್ ತಮ್ಮ ೨೨ನೇ ಗ್ರ್ಯಾಂಡ್ಸ್ಲಾಮ್ ಫೈನಲ್ನಲ್ಲಿ ಕೇವಲ ಆರು ಗೇಮ್ಗಳನ್ನು ಮಾತ್ರ ಸೋತರು.
ಲಾಟ್ವಿಯಾದ ಶ್ರೇಯಾಂಕ ರಹಿತ ಆಟಗಾರ್ತಿ ಜೆಲೆನಾ ಓಸ್ತಪೆಂಕೊ ಶನಿವಾರ ಚೊಚ್ಚಲ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ೨೦ ವರ್ಷದ ಆಟಗಾರ್ತಿ ಜೆಲೆನಾ ೪-೬, ೬-೪, ೬-೩ರಲ್ಲಿ ಅನುಭವಿ ಸಿಮೊನಾ ಹಲೆಪ್ಗೆ ಆಘಾತ ನೀಡಿದರು. ಜೆಲೆನಾ ಇಲ್ಲಿ ಪ್ರಶಸ್ತಿ ಗೆದ್ದುಕೊಳ್ಳು ವುದರೊಂದಿಗೆ ಹಲವು ಪ್ರಥಮಗಳಿಗೆ ಕಾರಣರಾಗಿದ್ದಾರೆ. ಗ್ರ್ಯಾಂಡ್ಸ್ಲಾಮ್ ಗೆದ್ದ ಮೊದಲ ಲಾಟ್ವಿಯಾದ ಆಟಗಾರ್ತಿ ಎಂಬ ಕಿರೀಟ ಇವರ ಮುಡಿಗೆ ಏರಿದೆ. ಶ್ರೇಯಾಂಕ ರಹಿತ ಆಟಗಾರ್ತಿ ಗ್ರ್ಯಾಂಡ್ಸ್ಲಾಮ್ ಗೆದ್ದಿರುವುದು ಕೂಡ ಇದೇ ಮೊದಲು. ಕಡಿಮೆ ರ್ಯಾಂಕಿಂಗ್ ೪೭ ಹೊಂದಿರುವ ಆಟಗಾರ್ತಿ ಯೊಬ್ಬರು ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವುದು ಕೂಡ ಇದೇ ಮೊದಲು. ಫ್ರೆಂಚ್ ಓಪನ್ ಗೆದ್ದ ಕಿರಿಯ ಆಟಗಾರ್ತಿ ಎಂಬ ಶ್ರೇಯ ಕೂಡ ಇವರದಾಗಿದೆ. ೧೯೯೭ರಲ್ಲಿ ಕೂಡ ೨೦ ವರ್ಷದ ಆಟಗಾರ್ತಿ ಇವಾ ಮಜೋಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು.

Related posts

Leave a Reply