Header Ads
Breaking News

ಬಂಟ್ವಾಳದಲ್ಲಿನ ಶಾಶ್ವತ ನೀರಾವರಿ ಯೋಜನೆಯಲ್ಲೇ ನೀರಿನ ಅಭಾವ!

ಬಂಟ್ವಾಳ: ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಶಾಶ್ವತ ನೀರಾವರಿ ಯೋಜನೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ೬೫ ಜನವಸತಿ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸಂಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಿರುವ ಮಹತ್ವಕಾಂಕ್ಷಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬೇಸಿಗೆಯಲ್ಲಿ ಕೈಕೊಡುವ ಲಕ್ಷಣ ಗೋಚರಿಸಿದೆ. ಮುಂದಿನ ಹತ್ತು ದಿನಗಳಿಗೆ ಮಾತ್ರ ನದಿಯಲ್ಲಿ ನೀರಿನ ಲಭ್ಯತೆ ಇದ್ದು ಈ ಯೋಜನೆಯನ್ನು ಅವಲಂಬಿಸಿಕೊಂಡಿರುವ ಗ್ರಾಮಗಳು ಕುಡಿಯುವ ನೀರಿಗಾಗಿ ಹಳೆ ಗಂಡನ ಪಾದವೇ ಗತಿ ಎನ್ನುವಂತೆ ಮತ್ತೆ ಕೊಳವೆ ಬಾವಿಯ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮೀಣ ಭಾಗದ ಜನರ ನೀರಿನ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಸಂಗಬೆಟ್ಟು ಗ್ರಾಮದಲ್ಲಿ ಬಂಟ್ವಾಳ ತಾಲೂಕಿನ ಮೊದಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಈ ಮಹತ್ವಕಾಂಕ್ಷಿ ಯೋಜನೆಗೆ ಬಂಟ್ವಾಳ- ಮೂಡುಬಿದಿರೆಯ ಗಡಿ ಭಾಗದಲ್ಲಿ ಹರಿಯುವ ಫಲ್ಗುಣಿ ನದಿ ನೀರಿನ ಆಸರೆಯಾಗಿದೆ. ಸಂಗಬೆಟ್ಟು, ಪಂಜಿಕಲ್ಲು, ರಾಯಿ, ಅರಳ, ಕುಕ್ಕಿಪಾಡಿ, ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಈ ಯೋಜನೆಯ ಫಲಾನುಭವಿಗಳು. ಕಳೆದ ಫೆಬ್ರವರಿ ತಿಂಗಳವರೆಗೆ ನೀರು ಪೂರೈಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನದಿಯಲ್ಲಿ ನೀರಿನ ಅಭಾವದಿಂದಾಗಿ ಅಗತ್ಯ ಸಂದರ್ಭದಲ್ಲಿ ನಿಷ್ಪ್ರಯೋಜಕವಾಗುತ್ತಿದೆ. ಫಲ್ಗುಣಿ ನದಿ ತೀರದಲ್ಲಿರುವ ಸಂಗಬೆಟ್ಟು ಗ್ರಾಮ ಪಂಚಾಯತಿಯೇ ಹಳೆ ಕೊಳವೆ ಬಾವಿಯನ್ನು ಪುನರ್ ಅವಲಂಬಿಸಿದ್ದು ಇನ್ನೂ ದೂರದ ಗ್ರಾಮಗಳ ಪರಿಸ್ಥಿತಿ ಇದಕ್ಕಿಂತಲೂ ಭಿನ್ನ.

ನದಿಯ ಮೇಲ್ಭಾಗದಲ್ಲಿ ಸಮೃದ್ದವಾಗಿ ನೀರು ತುಂಬಿ ಕೊಂಡಿದೆ. ಕೆಳ ಭಾಗ ಬರಡಾಗುತ್ತಿದೆ. ಬಂಟ್ವಾಳ- ಮೂಡುಬಿದಿರೆಯ ಗಡಿ ಭಾಗದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಗೆ ಪುಚ್ಚಮೋಗರು ಸೇತುವೆಯ ಬಳಿ ಕಿಂಡಿ ಅಣೆಕಟ್ಟು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿರುವುದರಿಂದ ಮೇಲ್ಭಾಗದಲ್ಲಿ ನೀರು ಸಮೃದ್ದವಾಗಿದೆ. ಈ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ಮೂಡಬಿದಿರೆ ಪುರವಾಸಿಗಳಿಗೆ ಸರಬರಾಜು ಮಾಡಲು ಮಾತ್ರ ಬಳಸಲಾಗುತ್ತಿದೆ. ಇದರ ಕೆಳ ಭಾಗದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ರೇಚಕ ಸ್ಥಾವರ ನಿರ್ಮಿಸಲಾಗಿದೆ. ಬಿಸಿಲಿನ ತಾಪಕ್ಕೆ ಅಣೆಕಟ್ಟಿನ ಕೆಳಭಾಗದಲ್ಲಿ ನೀರು ಕಡಿಮೆಯಾಗಿ ಮರಳು, ಬಂಡಕಲ್ಲು ಕಾಣಿಸುತ್ತಿದೆ. ಹೆಚ್ಚೆಂದರೆ ಒಂದುವಾರಕ್ಕೆ ಬೇಕಾಗುವಷ್ಟು ಮಾತ್ರ ನೀರು ನದಿಯಲ್ಲಿದ್ದು ಫಲ್ಗುಣಿ ನದಿ ನೀರನ್ನೇ ನಂಬಿ ನಿರ್ಮಾಣಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೀರಿಲ್ಲದೆ ಸೊರಗುವಂತಾಗಿದೆ.

ಜನರಿಗೆ ನೀರಿನ ಅಗತ್ಯತೆ ಹೆಚ್ಚಿರುವುದು ಬೇಸಿಗೆಯಲ್ಲಿ. ವರ್ಷಪೂರ್ತಿ ನೀರು ನೀಡುವ ಉದ್ದೇಶವನ್ನಿಟ್ಟುಕೊಂಡು ನಿರ್ಮಾಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನದಿಯಲ್ಲಿ ನೀರಿಲ್ಲದೆ ಹೋದರೆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಈಗಿರುವ ಕಿಂಡಿ ಅಣೆಕಟ್ಟಿನ ಕೆಳಭಾಗದಲ್ಲಿ ಇನ್ನೊಂದು ಅಣೆಕಟ್ಟು ನಿರ್ಮಿಸಿದರೆ ಬೇಸಿಗೆಯಲ್ಲೂ ಸಾಕಷ್ಟು ನೀರು ದೊರೆತು ಬಹುಗ್ರಾಮ ಯೋಜನೆಯಡಿ ವರ್ಷಪೂರ್ತಿ ನೀರು ಪೂರೈಸಲು ಸಾಧ್ಯವಿದೆ ಎನ್ನುವುದು ಪ್ರಜ್ಞಾವಂತರ ಅನಿಸಿಕೆ.

Related posts

Leave a Reply

Your email address will not be published. Required fields are marked *