Breaking News

ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ

ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಹಲವು ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಪ್ರಯೋಜನಕಾರಿ ಕೆಲಸಗಳು ನಡೆದಿವೆ. ಬಹುಗ್ರಾಮ ಕುಡಿಯುವ ನೀರು, ರಸ್ತೆಗಳು, ಬಸ್ ನಿಲ್ದಾಣ, ಸಮುದಾಯ ಭವನ ಇವುಗಳಲ್ಲಿ ಸೇರಿವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನರಿಕೊಂಬು ಗ್ರಾಮದ ಬಿಜೆಪಿಯಲ್ಲಿದ್ದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಟ್ಟು 135 ಕೋಟಿ ರೂಗಳು ವೆಚ್ಚವಾಗಲಿದ್ದು, ನರಿಕೊಂಬು ಶಂಭೂರು ಯೋಜನೆಗೆ ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಲಿದೆ. ಪುಚ್ಚೇರಿ ಮತ್ತು ಮೂಲಾರ್‌ಪಟ್ನ ಮಧ್ಯೆ ಅಣೆಕಟ್ಟು ನಿರ್ಮಿಸುವ ಯೋಚನೆ ಇದೆ. ಕಡೇಶ್ವಾಲ್ಯ ಸೌಹಾರ್ದ ಸೇತುವೆ ನಿರ್ಮಾಣ ಕೆಲಸಕ್ಕೆ ಚಾಲನೆ ದೊರಕಿದೆ. ಬಂಟ್ವಾಳ ಬಳಿಯೂ ಸೇತುವೆ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದೆ. 94 ಸಿಸಿಯಡಿ ಹಕ್ಕುಪತ್ರ ನೀಡಲಾಗುತ್ತಿದೆ ಅದಕ್ಕೆ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಡಿ ಹಲವು ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ. ಐಬಿ ಬಳಿ ಮತ್ತೊಂದು ಪಾರ್ಕ್, ಬಂಟ್ವಾಳದಲ್ಲಿ ಪಂಜೆ ಭವನ, ಬಿ.ಸಿ.ರೋಡಿನಲ್ಲಿ ಬಸ್ ನಿಲ್ದಾಣ, ಮೆಸ್ಕಾಂ ಭವನ ಹಾಗೂ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಪ್ರಗತಿಯಲ್ಲಿದೆ. ರಾಜ್ಯ ಸರಕಾರ ಹಲವು ಯೋಜನೆಗಳನ್ನು ಜನರಿಗಾಗಿ ಒದಗಿಸಿದ್ದು, ಅರಣ್ಯ ಇಲಾಖೆ ಮೂಲಕವೂ ಗ್ಯಾಸ್ ಕಿಟ್ ವಿತರಿಸಲಾಗಿದೆ ಎಂದು ಸಚಿವ ರೈ ಹೇಳಿದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply