
ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳಿಗೆ ಬೆಳಿಗ್ಗೆ 7 ಗಂಟೆ ಯಿಂದಲೇ ಮತದಾನ ಆರಂಭಗೊಂಡಿದೆ. ಎಲ್ಲಾ ಮತಗಟ್ಟೆಗಳಲ್ಲೂ ಶಾಂತಿಯುತ ವಾಗಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನರು ಸರತಿ ಸಾಲಿನಲ್ಲಿ ನಿಂತು ಮತದಾನಕ್ಕೆ ಸಹಕರಿಸುತ್ತಿದ್ದು ಕೋವಿಡ್ ಹಿನ್ನಲೆಯಲ್ಲಿ ಟೆಂಪರೆಚರ್ ಪರೀಕ್ಷಿಸಿ ಮತ ಚಲಾಯಿಸಲು ಅವಕಾಶ ನೀಎಲಾಗುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ತಮ್ಮ ಬೂತ್ ಗಳಲ್ಲಿ ಮತದಾರರನ್ನು ಸೆಳೆಯಲು ಕೊನೆಯ ಹಂತದ ಪ್ರಯತ್ನ ನಡೆಸುತ್ತಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತೆಂಕ ಎಡಪದವಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರೆ, ಮಾಜಿ ಸಚಿವ ಬಿ. ರಮನಾಥ ರೈ ಕಳ್ಳಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಡಂಬಿಲ ಸೇಕ್ರೆಡ್ ಹಾರ್ಟ್ ಅನುದಾನಿತ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ ಫರಂಗಿಪೇಟೆಗೆ ಭೇಟಿ ನೀಡಿ ಬೆಂಬಲಿತ ಅಭ್ಯರ್ಥಿಗಳಿಗೆ ಉತ್ಸಾಹ ತುಂಬಿದರು.ದೇವಸ್ಯ ಪಡೂರು ಎಂಬಲ್ಲಿ ಹೊಸ ಮತದಾರರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆಯಾದರೂ ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದ ಕಾರಣ ಮತ ಚಲಾಯಿಸಲು ಅವಕಾಶ ನೀಡದ ಕಾರಣ ಯುವ ಮತದಾರರು ನಿರಾಸೆಗೊಳಗಾದರು.