Header Ads
Breaking News

ಬಂಟ್ವಾಳದ ರಥಬೀದಿ ರಸ್ತೆ ಕಂಟೈನ್ಮೆಂಟ್ ವಲಯದಿಂದ ಮುಕ್ತಿ

ಬಂಟ್ವಾಳ: ಬಂಟ್ವಾಳ ಪೇಟೆಯ ಕಂಟೈನ್ಮೆಂಟ್ ವಲಯದ ಗಡಿಯನ್ನು ಮರು ಪರಿಷ್ಕರಿಸಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಶುಕ್ರವಾರ ಸಂಜೆ ಆದೇಶ ಹೊರಡಿಸಿದ್ದು, ಬಂಟ್ವಾಳ ರಥಬೀದಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣಕ್ಕೆ ನಿರ್ದಿಷ್ಟ ಗಡಿಗುರುತನ್ನು ತಿಳಿಸಲಾಗಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ಬಂಟ್ವಾಳ ಪುರಸಭೆ ಬಳಿಯಿಂದ ರಥಬೀದಿಗೆ ಅಡ್ಡ ಇದ್ದ ಬ್ಯಾರಿಕೇಡ್ ತೆರವಾಗಿದ್ದು, ವಾಹನ ಸಂಚಾರ ಆರಂಭವಾಯಿತು.

ಬಂಟ್ವಾಳ ನಗರ ಠಾಣೆಯ ಎಸ್‍ಐ ಅವಿನಾಶ್ ಅವರೇ ಮುಂದೆ ನಿಂತು,ಭಾಮಿ ಜಂಕ್ಷನ್ , ಕೊಟ್ರಮಣಗಂಡಿಯಲ್ಲಿ ಜೆಸಿಬಿ ಮೂಲಕ ಮಣ್ಣಿನ ರಾಶಿಯನ್ನು ತೆರವುಗೊಳಿಸಿದರು. ಇದೀಗ ರಥಬೀದಿ ರಸ್ತೆ ಮಾತ್ರ ಕಂಟೈನ್ಮೆಂಟ್ ವಲಯದಿಂದ ಮುಕ್ತಗೊಂಡಂತಾಗಿದೆ. ಕೋವಿಡ್ ಪ್ರಕರಣಕ್ಕೆ ಸಂಬಂಧಿಸಿದವರು ವಾಸಿಸುವ ಮನೆಗಳ ಸುತ್ತಮುತ್ತ ಹೊಸ ಮಾರ್ಗಸೂಚಿಯನ್ವಯ ಗುರುತು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎ.19 ರಂದು ಬಂಟ್ವಾಳ ಪೇಟೆಯ ಮಧ್ಯಭಾಗದ ಪರಿಸರದಲ್ಲಿ ಕೊರೋನ ಸೋಂಕಿಗೆ ಗೃಹಿಣಿ ಮೃತಪಟ್ಟ ಬಳಿಕ ರಥಬೀದಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು ಬಂಟ್ವಾಳ ಪೇಟೆಯ ಸೀಲ್‍ಡೌನ್ ತೆರವುಗೊಳಿಸುವಂತೆ ಬುಧವಾರ ರಾತ್ರಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದರು. ಗುರುವಾರ ಬೆಳಿಗ್ಗೆ ಡಿಸಿಎಂ ಜೊತೆಗೂ ಮಾತುಕತೆ ನಡೆಸಿ. ಇಲ್ಲಿನ ಒಟ್ಟು ಸ್ಥಿತಿಗತಿಯ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೂ ಮನವರಿಕೆ ಮಾಡಿಕೊಟ್ಟಿದ್ದು,ತಕ್ಷಣ ಸಿಎಸ್ ಅವರು ಹೊಸ ನೋಟಿಫೀಕೇಶನ್ ಹೊರಡಿಸಿ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದು,ಅದರಂತೆ ಶುಕ್ರವಾರ ರಾತ್ರಿ ಬಂಟ್ವಾಳ ಕಸಬಾದ ಕಂಟೈನ್ಮೆಂಟ್ ವಲಯದ ಗಡಿಯನ್ನು ಮರುನಿಗದಿಗೊಳಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.ಈ ನಡುವೆ ಗುರುವಾರ ಸೀಲ್ ಡೌನ್ ಪ್ರದೇಶದ ನಾಗರಿಕರು ಇಲ್ಲಿ ಪ್ರತಿಭಟನೆ ಕೂಡ ನಡೆಸಿದ್ದರು.

Related posts

Leave a Reply

Your email address will not be published. Required fields are marked *