Header Ads
Header Ads
Header Ads
Breaking News

ಬಂಟ್ವಾಳದ ಶಿವರಾಮ ಜೋಗಿಯವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ತೆಂಕುತಿಟ್ಟು ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ಕಲಾವಿದ

ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನದಲ್ಲಿ 63 ವರ್ಷ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸರಕಾರ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರವುದು ತುಂಬಾ ಖುಷಿ ನೀಡಿದೆ… ಇದು ಹಿರಿಯ ತೆಂಕುತಿಟ್ಟು ಯಕ್ಷಗಾನ ಕಲಾವಿದ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಬಂಟ್ವಾಳದ ಶಿವರಾಮ ಜೋಗಿ ಅವರ ಮನದ ಮಾತು. ತನ್ನ 13 ನೇ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಅವರು ತನ್ನ 77 ನೇ ವಯಸ್ಸಿನಲ್ಲಿಯೂ ಮುಖಕ್ಕೆ ಬಣ್ಣ ಹಚ್ಚಿ ಯಕ್ಷಗಾನದಲ್ಲಿ ಮುಂದುವರೆಯಿತ್ತಿರುವುದು ಅವರಿಗೆ ಯಕ್ಷಗಾನದ ಮೇಲಿರುವ ಪ್ರೀತಿ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ಉಪ್ಪಿನಂಗಡಿಯ ಕಾಂಚನ ನಿವಾಸಿಯಾಗಿದ್ದ ಗುರುವಪ್ಪ ಜೋಗಿ ಹಾಗೂ ಸೀತಮ್ಮ ದಂಪತಿಗಳ 8 ಮಕ್ಕಳ ಪೈಕಿ ಜೇಷ್ಠ ಪುತ್ರನಾಗಿದ್ದ ಶಿವರಾಮ ಜೋಗಿಯವರು ೬ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು ಕಾರಣಾಂತರಗಳಿಂದ ಶಾಲೆ ಬಿಡುವ ಪರಿಸ್ಥಿತಿ ಒದಗಿ ಬಂದಿತ್ತು. ಬಳಿಕ ಸಂಗೀತಾ ಶಾಲೆಯಲ್ಲಿ ತಾಳ, ರಾಗ ಶೃತಿ, ರಾಗಗಳ ಅಧ್ಯಯನದಲ್ಲಿದ್ದಾಗ ವಿಟ್ಲ ಗೋಪಾಲೃಷ್ಣ ಜೋಷಿಯವರು ಕೂಡ್ಲು ಮೇಳಕ್ಕೆ ಸೇರಿಸುವ ಮೂಲಕ ಜೋಗಿಯವರು ಯಕ್ಷರಂಗಕ್ಕೆ ಪ್ರವೇಶಿಸುವಂತಾಯಿತು. 2 ವರ್ಷಗಳ ಕಾಲ ಕೂಡ್ಲು ಮೆಳದಲ್ಲೇ ಗೆಜ್ಜೆ ಕಟ್ಟಿದ ಅವರು ಅದನ್ನೇ ಪೂರ್ಣಕಾಲಿಕ ವೃತ್ತಿಯನ್ನಾಗಿ ಸ್ವೀಕರಿಸಿ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಮುಲ್ಕಿ ಮೇಳದಲ್ಲಿ ೨ ವರ್ಷ, ಸುರತ್ಕಲ್ ಮೇಳದಲ್ಲಿ 40 ವರ್ಷ, ಕರ್ನಾಟಕ ಮೇಳದಲ್ಲಿ ೨ ವರ್ಷ, ಮಂಗಳಾದೇವಿ ಮೇಳದಲ್ಲಿ 2 ವರ್ಷ, ಎಡನೀರು ಮೇಳದಲ್ಲಿ ೨ ವರ್ಷ, ಕುಂಟಾರು ಮೇಳದಲ್ಲಿ 2 ವರ್ಷ, ಹೊಸನಗರ ಮೇಳದಲ್ಲಿ 11 ವರ್ಷ ಹೀಗೆ ಸುದೀರ್ಘ 63 ವರ್ಷಗಳ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿ ಕಲಾ ಸೇವೆಯನ್ನು ನೀಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್, ವಿಟ್ಲ ಗೋಪಾಲಕೃಷ್ಣ ಜೋಷಿ, ಕುಡಾಣ ಗೋಪಾಲಕೃಷ್ಣ ಭಟ್ ಇವರ ಯಕ್ಷ ಗುರುಗಳು.

ತನ್ನ 13 ನೇ ವಯಸ್ಸಿನಲ್ಲಿ ಸತ್ಯಹರಿಶ್ಚಂದ್ರ ಯಕ್ಷಗಾನದಲ್ಲಿ ಶೇಣಿಯವರ ಜೊತೆ ಲೋಹಿತಾಶ್ವನಾಗಿ ಮೊದಲ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಬಳಿಕ ಅಭಿಮನ್ಯು, ಬಬ್ರುವಾಹನ, ಪರಶುರಾಮ ಮೊದಲಾದ ಪುಂಡು ವೇಷಗಳನ್ನು ನಿರ್ವಹಿಸಿದ್ದರು. ಕರ್ಣ, ಅರ್ಜುನ, ವೀರವರ್ಮ, ಋತುಪರ್ಣ, ತಾಮ್ರಧ್ರುವ ಮೊದಲಾದ ರಾಜ ವೇಷಗಳ ಜೊತೆಗೆ ಕಂಸ, ರಾವಣ, ಮಾಗದ, ವಾಲಿ ಮೊದಲಾದ ಬಣ್ಣದ ವೇಷಗಳನ್ನು ನಿರ್ವಹಿಸಿ ಎಲ್ಲಾ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ.

ಇವರ ಕಲಾ ಸೇವೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡಾ. ಕಿಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಶಸ್ತಿ ಸೇರಿದಂತೆ ಹಲವಾರ ಸನ್ಮಾನಗಳು ಇವರಿಗೆ ಒಲಿದು ಬಂದಿದೆ. ಪತ್ನಿ ಲತಾ, ಮಗಳು ಸೌಮ್ಯ, ಮಗ ಸುಮಂತ್‌ರಾಜ್ ಅವರೊಂದಿಗಿನ ಸುಂದರ ಕುಟುಂಬ. ಬಿ.ಸಿ.ರೋಡಿನ ಪೂಂಜರಕೋಡಿಯ ಯಕ್ಷದೀಪ ಮನೆಯಲ್ಲಿ ವಾಸ್ತವ್ಯ ಹೊಂದಿರುವ ಇವರ ಮಗ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಹವ್ಯಾಸಿ ಯಕ್ಷಗಾನ ಕಲಾವಿದ.

ಅಭಿನಂದನೆಗಳ ಮಹಾಪೂರ: ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಬೆಳಿಗ್ಗೆ ಸುಳಿವು ದೊರೆತ್ತಿದ್ದರೂ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗದ ಕಾರಣ ಪ್ರಶಸ್ತಿ ಬರಬಹುದೆನ್ನುವ ಆಸೆಯನ್ನು ಬಿಟ್ಟಿದ್ದರು. ಸಂಜೆಯ ವೇಳೆಗೆ ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಗೆಳೆಯರು, ಬಂಧುಗಳು ಪೋನ್ ಮಾಡಿ ಅಭಿನಂದನೆ ಸಲ್ಲಿಸಿದಾಗ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸುದೀರ್ಘ ವರ್ಷಗಳ ತನ್ನ ಕಲಾ ಸೇವೆಗೆ ಪ್ರಶಸ್ತಿ ಬಂದಿರುವ ಸಡಗರ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply