
ಬಂಟ್ವಾಳ: ಬಂಟ್ವಾಳದ ಪುದು ಗ್ರಾಮದ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ಎರಡು ದಿನಗಳ ಕಾಲ ನಡೆದ ಸ್ಕೌಟ್ಸ್ ಗೈಡ್ಸ್ ಮೇಳ, ಕಬ್ಸ್ ಬುಲ್ ಬುಲ್ಸ್ ಉತ್ಸವದ ಪ್ರಯುಕ್ತ ಗುರುವಾರ ರಾತ್ರಿ ಭವ್ಯ ಶಿಬಿರಾಗ್ನಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಬಂಟ್ವಾಳ ತಹಶೀಲ್ದಾರ್ ರಶ್ಮಿ ಅವರು ಶಿಬಿರಕ್ಕೆ ಚಾಲನೆ ನೀಡಿದರು. ಅಗ್ನಿ ಹೇಗೆ ಬೆಳಕು ನೀಡುತ್ತದೋ ಅದೇ ರೀತಿ ನಮ್ಮ ತಾಲೂಕಾಗಲಿ ದೇಶದಲ್ಲಾಗಲಿ ಇರುವ ಕತ್ತಲೆಯನ್ನು ಈ ಬೆಳಕು ದೂರ ಮಾಡಲಿ ಎಂದು ಶಿಬಿರಾರ್ಥಿಗಳಿಗೆ ಪ್ರತಿಜ್ಞೆ ಭೋದಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಎಂದಿಗೂ ಹಣದ ಹಿಂದೆ ಹೋಗಬೇಡಿ, ಸರಿಯಾಗಿ ಅರ್ಥಮಾಡಿಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಹೊಂದಿರ ಬೇಕು, ನೀವು ಮುಂದೆ ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತೀರಿ ಆ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ, ಆದರೆ ಗುರಿಯನ್ನು ತಲುಪುವು ಪ್ರಯತ್ನ ನಿಮ್ಮಲ್ಲಿರಬೇಕು ಎಂದರು.
ಈ ಸಂದರ್ಭ ಸುಜೀರು ಪ್ರೌಢಶಾಲೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮ್ಮರ್ ಫಾರೂಕ್, ಪುದು ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ಕಿಶೋರ್ ಕುಮಾರ್, ಸುಜಾತ, ಪ್ರಮುಖರಾದ ರಫೀಕ್ ಪೇರಿಮಾರ್, ಸಲಾಂ ಮಲ್ಲಿ, ಇಸ್ಮಾಯಿಲ್, ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ.ಎಂ.ತುಂಬೆ ಹಾಜರಿದ್ದರು. ಬಳಿಕ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.