Header Ads
Header Ads
Breaking News

ಬಂಟ್ವಾಳ ತಾಲೂಕಿನ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನ ಶತಮಾನೋತ್ತರ ಬೆಳ್ಳಿಹಬ್ಬದ ಸಮಾರೋಪ ಸಮಾರಂಭ

ವಿಟ್ಲ: ಬಂಟ್ವಾಳ ತಾಲೂಕಿನ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನ ಶತಮಾನೋತ್ತರ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದ ಪ್ರಯುಕ್ತ ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನಾ ನೇತೃತ್ವದಲ್ಲಿ ಪ್ರವೇಶ ದ್ವಾರ ಉದ್ಘಾಟನೆ, ವಿಶೇಷ ಬಲಿಪೂಜೆ ನಡೆಯಿತು.

ಈ ಸಂದರ್ಭ ಮಾತನಾಡಿದ ಡಾ. ಪೀಟರ್ ಪಾವ್ಲ್ ಸಲ್ದಾನಾ ಅವರು ಸಾಮರಸ್ಯದ ಮತ್ತು ಒಗ್ಗಟ್ಟಿನ ಜೀವನ ನಡೆಸಿದರೆ ಯಶಸ್ಸನ್ನು ಕಾಣಬಹುದು ಎಂಬುದಕ್ಕೆ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ವ್ಯಾಪ್ತಿಯ ಕುಟುಂಬಗಳೇ ಸಾಕ್ಷಿ. ಸೂರಿಕುಮೇರು ಚರ್ಚ್‌ನ ಶತಮಾನೋತ್ತರ ಬೆಳ್ಳಿಹಬ್ಬದ ಆಚರಣೆಯೂ ಅನುಕರಣೀಯ ಎಂದು ಹೇಳಿದರು.

ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾತನಾಡಿ, ಚರ್ಚ್ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುವುದಾಗಿ ಘೋಷಿಸಿ, ಸಾಮರಸ್ಯದ ಬದುಕಿಗೆ ಚರ್ಚ್ ಮಾದರಿಯಾಗಿದ್ದು, ಕೋಮು ಸಾಮರಸ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡಿದೆ. 125 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇದು ಪುಣ್ಯಭೂಮಿಯಾಗಿದೆ ಎಂದರು.

ಸಮಾರಂಭದಲ್ಲಿ ಶತಮಾನೋತ್ತರ ಬೆಳ್ಳಿಹಬ್ಬದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಗೆ ತೊಡಗಿಸಿಕೊಂಡ ಕುಟುಂಬಗಳನ್ನು ಗುರುತಿಸಿ ಗೌರವಿಸಲಾಯಿತು. ಅತಿಥಿಗಳ ಸ್ವಾಗತಕ್ಕೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಇಗರ್ಜಿಯ ಶತಮಾನೋತ್ತರ ಬೆಳ್ಳಿಹಬ್ಬ ಕೇವಲ ಅದರ ವ್ಯಾಪ್ತಿಗೊಳಪಟ್ಟ 125 ಕುಟುಂಬಗಳ ಸಂಭ್ರಮವಷ್ಟೇ ಆಗಿರಲಿಲ್ಲ. ಹಿಂದು, ಮುಸ್ಲಿಂ ಬಾಂಧವರೂ ಕಾರ್ಯಕ್ರಮಕ್ಕೆ ನೆರವಾಗುವ ಮೂಲಕ ಸೌಹಾರ್ದ ಮೆರೆದರು. ಪುರುಷೋತ್ತಮ ಪಾಟೀಲ, ಓಂಪ್ರಕಾಶ್ ಜುವೆಲ್ಲರಿ, ಎಸ್.ಎ.ಖಾಸಿಂ, ಚಿದಾನಂದ, ಸತೀಶ್ ಮತ್ತು ಗಣೇಶ್ ಜುವೆಲ್ಲರಿಯವರು ಕಾರ್ಯಕ್ರಮಕ್ಕೆ ಅಗತ್ಯವಿದ್ದ ಕೊಡುಗೆ ನೀಡಿ ಸೌಹಾರ್ದತೆ ಮೆರೆದರು.

ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ನಡೆಸಲಾಗಿದ್ದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಇದೇ ವೇಳೆ ಲೋಕಾರ್ಪಣೆಗೊಳಿಸಲಾಯಿತು. ನೂತನವಾಗಿ ನಿರ್ಮಿಸಲಾದ ಆಕರ್ಷಕ ಪ್ರವೇಶದ್ವಾರ , ಇಸ್ರೇಲ್ ಮಾದರಿಯ ಪುಟ್ ಪಾತ್ ರಸ್ತೆ , ಕಲ್ವಾರಿ ಪರ್ವತದ 14 ಶಿಲುಬೆ ಯಾತ್ರೆ, ಕಾಂಕ್ರೀಟು ರಸ್ತೆ ನಿರ್ಮಾಣ, ಸೋಲಾರ್ ಲೈಟ್, ಧ್ವನಿವರ್ಧಕ ವ್ಯವಸ್ಥೆ, ಸಿ.ಸಿ.ಕ್ಯಾಮೆರಾ ಅಳವಡಿಕೆ, ರಸ್ತೆಯ ಇಕ್ಕೆಲಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಉದ್ಘಾಟನೆಯನ್ನೂ ಅತಿಥಿಗಣ್ಯರು ನೆರವೇರಿಸಿದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಲಾರೆನ್ಸ್ ಮುಕ್ಕುಝಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್, ಮೊಗರ್ನಾಡ್ ಚರ್ಚ್‌ನ ಧರ್ಮಗುರು ಡಾ.ಮಾರ್ಕ್ ಕಾಸ್ಟೆಲಿನೋ ಶುಭಹಾರೈಸಿದರು.

ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಪಂ ಸದಸ್ಯ ಪ್ರಭಾಕರ ಪ್ರಭು, ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಶೆಟ್ಟಿ, ಸಿಸ್ಟರ್ ನ್ಯಾನ್ಸಿ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ, ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ, ಸ್ಟ್ಯಾನಿ ಡಿಸೋಜ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *