Header Ads
Breaking News

ಬಂಟ್ವಾಳ ತಾಲೂಕು ಪ್ರಗತಿ ಪರಿಶೀಲನಾ ಸಭೆ!

ಬಂಟ್ವಾಳ ತಾಲೂಕು ಪಂಚಾಯತ್‌ನ ಪ್ರಗತಿ ಪರಿಶೀಲನಾ ಸಭೆಯು ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ತಾಲೂಕಿನ ಪ್ರಗತಿಯಲ್ಲಿ ತೀವ್ರ ಹಿನ್ನಡೆಯಾಗಿರುವ ಬಗ್ಗೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಹಾಗೂ ಉಪಕಾರ್ಯದರ್ಶಿ ಮಹೇಶ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಗತಿ ಸಾಧಿಸದ ಪಿಡಿಓಗಳಿಗೆ ಅವರು ಕ್ಲಾಸ್ ತೆಗೆದುಕೊಂಡರು. ನರೇಗ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ವರದಿ ಪಡೆದ ಸಿಇಓ ಅವರು ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಬಂಟ್ವಾಳ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ನಡೆದಿಲ್ಲ, ಪ್ರಗತಿ ಕಾಮಗಾರಿಗಳ ಬಗ್ಗೆ ಸರಿಯಾದ ಯೋಜನೆ ರೂಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 19 ಗ್ರಾಮ ಪಂಚಾಯಿತಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿದ್ದು ಪ್ರತೀ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಂದ ಪ್ರಗತಿ ಹಿನ್ನಡೆಯಾಗಿರುವ ಬಗ್ಗೆ ಕಾರಣ ತಿಳಿದುಕೊಂಡ ಅವರು ದ.ಕ. ಜಿಲ್ಲೆಯಲ್ಲಿ ಮಂಗಳೂರು ಶೇ.79, ಬಂಟ್ವಾಳ, ಬೆಳ್ತಂಗಡಿ ಶೇ.35, ಸುಳ್ಯ, ಪುತ್ತೂರು ಶೇ. 45 ಪ್ರಗತಿ ಸಾಧಿಸಿದೆ ಎಂದರು.

ಬಂಟ್ವಾಳ ತಾಲೂಕಿನ 58 ಗ್ರಾ.ಪಂ.ಗಳ ಪೈಕಿ 51 ಗ್ರಾ.ಪಂ.ಗಳಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳಾಗಿದೆ. ಉಳಿದ ಏಳು ಗ್ರಾಮ ಪಂಚಾಯತ್‌ಗಳಾದ ಅಮ್ಮುಂಜೆ, ಬೋಳಂತೂರು, ಕರಿಯಂಗಳ, ಮೇರಮಜಲು, ನೆಟ್ಲಮುಡ್ನೂರು, ಸಜೀಪಮುನ್ನೂರು, ಸಜೀಪ ಪಡು ಗ್ರಾ.ಪಂ.ಗಳಲ್ಲಿ ನೀರಿಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲ ಎಂದು ಗರಂ ಆದ ಸಿಇಓ ಒಂದು ವಾರದೊಳಗಾಗಿ 10 ಹೊಸ ಕಾಮಗಾರಿಗಳನ್ನು ಗುರುತಿಸಿ ಜಿಲ್ಲಾ ಪಂಚಾಯಿತಿಗೆ ವರದಿ ನೀಡುವಂತೆ ಪಿಡಿಓಗಳಿಗೆ ಸೂಚಿಸಿದರು.ಅಪೂರ್ಣವಾಗಿರುವ ಚೆಕ್‌ಡ್ಯಾಂಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು, 36 ಅಂಗನವಾಡಿ ಕಟ್ಟಡಗಳ ಪೈಕಿ 29ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ. ನೀರಿನ ಸಮಸ್ಯೆಯಿಂದ ಕಟ್ಟಡ ನಿರ್ಮಾಣ ಬಾಕಿ ಉಳಿದಿರುವ ಅಂಗನವಾಡಿ ಕೇಂದ್ರಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಡಾ. ಸೆಲ್ವಮಣಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು. 2016-17ನೇ ಸಾಲಿನಲ್ಲಿ ಆರಂಭಗೊಂಡ ಅಂಗನವಾಡಿ ಕೇಂದ್ರದ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರ ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಅಂಗನವಾಡಿ ಕಟ್ಟುತ್ತಿದ್ದಿರೋ ಅರಮನೆ ಕಟ್ಟುತ್ತಿದ್ದಿರೋ ಎಂದು ಗರಂ ಆದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹೇಶ್, ನೆರವು ಘಟಕದ ಮಂಜುಳಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಉಪಸ್ಥಿತರಿದ್ದರು, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನ ಇಲಾಖೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಪಂಚಾಯಿತಿ ಪಿಡಿಓಗಳು ಹಾಜರಿದ್ದರು.

Related posts

Leave a Reply

Your email address will not be published. Required fields are marked *