Header Ads
Header Ads
Header Ads
Breaking News

ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಸಮರ್ಪಕ ತ್ಯಾಜ್ಯ ವಿಲೇವಾರಿ ರಾಜ್ಯ ಮಾಲಿನ್ಯ ಮಂಡಳಿಯಿಂದ ಅಸಮಾಧಾನ

ಬಂಟ್ವಾಳ: ಇಲ್ಲಿನ ಪುರಸಬೆಯ ತ್ಯಾಜ್ಯ ವಿಲೇವಾರಿ ಅಸಮರ್ಪಕತೆಯ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಅಸಮಾಧಾನ ವ್ಯಕ್ತಪಡಿಸಿದೆ. ಮಂಡಳಿಯ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ ಅವರ ನೇತೃತ್ವದಲ್ಲಿ ಸೋಮವಾರ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಹಾಗೂ ಸಾಹಯಕ ಅಧಿಕಾರಿ ವಿವೇಕ್ ಅವರು ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹಗೊಳ್ಳುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಂಟ್ವಾಳ ಪುರಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ವಾಹನಗಳಿಗೆ ಕಸ ವರ್ಗಾಯಿಸುವ ಸ್ಥಳವನ್ನು ನೋಡಿ ಪುರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಸ ವರ್ಗಾವಣೆ ಸ್ಥಳ ಕೊಳೆತು ನಾರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಪಿಯೂಸ್ ರೊಡ್ರಿಗಸ್ ಮಂಗಳವಾರವೇ ಎಲ್ಲಾ ಕಸಗಳನ್ನು ಶುಚಿಗೊಳಿಸುವಂತೆ ಸೂಚಿಸಿದರು. ರಸ್ತೆಯ ಪಕ್ಕದಲ್ಲಿ ಕಸ ರಾಶಿ ಹಾಕಬಾರದು ಎನ್ನುವ ನಿಯಮ ಇದೆ. ಜನರ ಆರೋಗ್ಯ ದೃಷ್ಟಿಯಿಂದಲೂ ಇದು ಸರಿಯಾದ ವಿಧಾನವಲ್ಲ. ಎಲ್ಲೆಂದರಲ್ಲಿ ಕಸ ತುಂಬಿ ಹೋಗಿದ್ದು ಕಸ ಎಸೆಯದಂತೆ ಎಚ್ಚರಿಕೆಯ ಫಲಕ ಹಾಕದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ವಾಹನಗಳಿಗೆ ಕಸ ವರ್ಗವಣೆಗೆ ಪ್ರತ್ಯೇಕ ಸ್ಥಳ ಗುರುತಿಸಲು ತಿಳಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪಾಣೆಮಂಗಳೂರು ಪೇಟೆಯ ಬದಿ ಕಸ ವಿಲೇವಾರಿಯ ಬಗ್ಗೆ ಸ್ಥಳೀಯ ಅಂಗಡಿದಾರರಿಂದ ಮಾಹಿತಿ ಪಡೆದುಕೊಂಡರು. ಶ್ರೀ ಶಾರಾದ ಪ್ರೌಢ ಶಾಲೆಯ ಬಳಿ ರಾಶಿ ಬೀಳುತ್ತಿರವ ಕಸವನ್ನು ತೆರವುಗೊಳಿಸಲು ಸೂಚಿಸಿದರು.


ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದ ಬಳಿ ಕೊಚ್ಚೆಯಂತಾಗಿರುವ ಕಸದ ರಾಶಿಯಿಂದ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಸ್ಥಳೀಯರಾದ ಡಾ. ಬಾಲಕೃಷ್ಣ, ರಾಜೇಂದ್ರ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕಸ ಎಸೆಯುವವರ ಬಗ್ಗೆ ನಿಗಾ ವಹಿಸಲು ಸಿಸಿ ಕ್ಯಾಮಾರ ಅಳವಡಿಸುವಂತೆ ಪಿಯೂಸ್ ರೋಡ್ರಿಗಸ್ ಸೂಚಿಸಿದರು. ಸ್ಥಳೀಯರ ಸಲಹೆಯ ಮೇರೆಗೆ ಕಸ ರಾಶಿ ಬೀಳುತ್ತಿರುವ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಅಥವಾ ಹೂವಿನ ಗಿಡಗಳ ಪಾರ್ಕ್ ಮಾಡಿ ಸಮಸ್ಯೆ ಬಗೆ ಹರಿಸುವುದಾಗಿ ಮುಖ್ಯಾಧಿಕಾರಿ ರೇಖ ಶೆಟ್ಟಿ ತಿಳಿಸಿದರು. ಸ್ವಣೋದ್ಯಮಿ ಸುನೀಲ್ ಅವರು ಇದಕ್ಕೆ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಬಳಿಕ ಬಡ್ಡಕಟ್ಟೆ, ಜಕ್ರಿಬೆಟ್ಟು, ಲೊರೆಟ್ಟೋ ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆರೋಗ್ಯಾಧಿಕಾರಿ ರತ್ನ ಪ್ರಸಾದ್ ಜತೆಗಿದ್ದರು. ಪರಿಸರ ಅಧಿಕಾರಿಗಳ ಭೇಟಿ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ಕಸ ವಿಲೇವಾರಿ ಕಾರ್ಯ ಎಂದಿಗಿಂತಲೂ ಚುರುಕಿನಿಂದ ನಡೆಯಿತು.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply