Header Ads
Breaking News

ಬಂಟ್ವಾಳ ಪುರಸಭೆಯ ವಿಶೇಷ ಸಭೆ- 2021- 22ನೇ ಸಾಲಿನ ಆಸ್ತಿ ತೆರಿಗೆ ಪರಿಷ್ಕರಣೆ

ಬಂಟ್ವಾಳ: ಪುರಸಭೆಯಲ್ಲಿ ಆಡಳಿತ ಪಕ್ಷ ತನ್ನ ಮಿತ್ರಪಕ್ಷದ ಸದಸ್ಯರ ಲಿಖಿತ ವಿರೋಧ, ವಿಪಕ್ಷಗಳ ಸಹಮತದೊಂದಿಗೆ 2021- 22ನೇ ಸಾಲಿನಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಾಡಳಿತ ನಿರ್ದೇಶಕರ ಸುತ್ತೋಲೆಯಂತೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿದ್ದು, ಅದರನ್ವಯ ಖಾಲಿ ಜಾಗಕ್ಕೆ ಶೇ.0.2, ವಾಣಿಜ್ಯಕ್ಕೆ ಶೇ.1 ಹಾಗೂ ವಾಸ್ತವ್ಯಕ್ಕೆ 0.6 ಶೇ.ರಷ್ಟು ತೆರಿಗೆ ವಿಧಿಸಿ ಜಾರಿಗೆ ತರಲು ನಡೆದ ವಿಶೇಷ ಸಭೆಯಲ್ಲಿ ನಿರ್ಣಯಿಸಲಾಯಿತು.

ನೀರಿನ ದರ ಪರಿಷ್ಕರಣೆಯನ್ನು ಸದ್ಯಕ್ಕೆ ತಡೆಹಿಡಿದಿದ್ದು, ಯಥಾಸ್ಥಿತಿಯಲ್ಲಿ ಮುಂದುವರಿಯಲು ಮಹತ್ವದ ನಿರ್ಣಯವನ್ನು ಇದೇ ವೇಳೆ ಸಭೆ ತೆಗೆದುಕೊಂಡಿತು. ಆಸ್ತಿ ತೆರಿಗೆಯ ಶುಲ್ಕವನ್ನು ವಿಧಿಸುವ ಕುರಿತಂತೆ ಮಾಹಿತಿಯನ್ಮು ಕಂದಾಯ ನಿರೀಕ್ಷಕರು ಸಭೆಯ ಮುಂದಿಟ್ಟರು. ಆರಂಭಿಕ ಹಂತದಲ್ಲಿ ಈ ಸುತ್ತೋಲೆಯನ್ನು ಆಕ್ಷೇಪಿಸಿದ ಸದಸ್ಯ ಜನಾರ್ದನ ಚಂಡ್ತಿಮಾರ್ ಈ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿದೆಯೇ? ಸರಕಾರ ಬೇಕಾದಾಗೆ ಸುತ್ತೋಲೆ ಹೊರಡಿಸುತ್ತದೆ.

ನಮಗೆ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಿದ್ದು, ಜನರು ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದರು. ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಗೋವಿಂದ ಪ್ರಭು ಅವರು ತೆರಿಗೆ ವಿಧಿಸುವ ವಿಚಾರದಲ್ಲಿರುವ ಗೊಂದಲದ ಬಗ್ಗೆ ಸಭೆಯ ಗಮನಸೆಳೆದರು. ಇದಕ್ಕೆ ಕಂದಾಯ ನಿರೀಕ್ಷಕರು ಉತ್ತರಿಸಿದರಲ್ಲದೆ ಇದನ್ನು ಜಾರಿಗೆ ತರದಿದ್ದಲ್ಲಿ ಸ್ವಚ್ಚಭಾರತ್, 15 ನೇ ಹಣಕಾಸು ಯೋಜನೆಯಡಿ ಅನದಾನವನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೀಡಲಾಗಿದೆ ಎಂದರು.


ಸಭೆಯಲ್ಲಿ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ವೇದಿಕೆಯಲ್ಲಿದ್ದರು. ಸದಸ್ಯರಾದ ಹರಿಪ್ರಸಾದ್, ವಿದ್ಯಾವತಿ, ಶಶಿಕಲಾ, ಮೊನೀಶ್ ಆಲಿ, ಲುಕ್‍ಮಾನ್, ಮಹಮ್ಮದ್ ನಂದರಬೆಟ್ಟು ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಇದಕ್ಕು ಮೊದಲು ವಿಕಲಚೇತನ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.

Related posts

Leave a Reply

Your email address will not be published. Required fields are marked *