Header Ads
Breaking News

ಬಂಟ್ವಾಳ ಪುರಸಭೆಯ ಸರ್ವೆ ವಿಚಾರ : ವಿಪಕ್ಷ ಸದಸ್ಯರಿಂದ ಸಭಾತ್ಯಾಗ

ಬಂಟ್ವಾಳ: ಪುರಸಭೆಯ ಸರ್ವೆ ವಿಚಾರಕ್ಕೆ ಸಂಬಂಧಿಸಿ ಹಿರಿಯ ಸದಸ್ಯ ಗೋವಿಂದ ಪ್ರಭು ಕೇಳಿದ ಪ್ರಶ್ನೆಗೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಹಾರಿಕೆಯ ಉತ್ತರ ನೀಡಿದರು ಎಂದು ಆರೋಪಿಸಿ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಸೋಮವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಅಧ್ಯಕ್ಷರು ಹಾಗೂ ಆಡಳಿತ ಪಕ್ಷ ಸದಸ್ಯರು ಗೋವಿಂದ ಪ್ರಭು ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪುರಸಭೆಯಿಂದ ಭೂ ಮಾಪನ ಇಲಾಖೆಗೆ ಸರ್ವೆ ಕಾರ್ಯಕ್ಕೆ ಬರೆಯಲಾದ ಪತ್ರದ ಬಗ್ಗೆ ಇಲಾಖೆಯಲ್ಲಿ ಸರ್ವೆ ವರದಿ ಕೇಳಿದ್ದೀರಾ ಎಂದು ಗೋವಿಂದ ಪ್ರಭು ಅವರು ಇಂಜಿನಿಯರ್ ಡಿಮೆಲ್ಲೋ ಅವರನ್ನು ಪ್ರಶ್ನಿಸಿದರು. ಈ ಸಂದರ್ಭ ಇಂಜಿನಿಯರ್ “ಕೇಳುವ” ಎಂದದ್ದು ಗೋವಿಂದ ಪ್ರಭು ಅವರನ್ನು ಕೆರಳಿಸಿತು. ಇಲ್ಲಿ ಹಿರಿಯ ಸದಸ್ಯರಿಗೆ ಬೆಲೆ ಇಲ್ಲ, ಅಧ್ಯಕ್ಷರಿಗೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ, ಕೇಳುವ ಎಂದರೆ ಅರ್ಥ ಏನು ಎಂದು ಎನ್ನುತ್ತಾ ಸಭೆಯಿಂದ ಹೊರ ನಡೆದರು. ನಮಗೆ ಮಾರ್ಗದರ್ಶನ ಮಾಡುವ ಹಿರಿಯ ಸದಸ್ಯರಿಗೆ ಗೌರವ ಇಲ್ಲದೆ ಇದ್ದರೆ ನಾವು ಸಭೆಯಲ್ಲಿ ಇರುವುದಿಲ್ಲ ಎಂದು ವಿಪಕ್ಷದ ಸದಸ್ಯರೆಲ್ಲರೂ ಸಭಾತ್ಯಾಗ ಮಾಡಿದರು. ಗೋವಿಂದ ಪ್ರಭು ಅವರನ್ನು ಮನವೊಲಿಸಿ ಸಭೆಗೆ ಕರೆ ತರುವಂತೆ ಆಡಳಿತ ಪಕ್ಷದ ಸದಸ್ಯರು ಮನವಿ ಮಾಡಿದ ಹಿನ್ನಲೆಯಲ್ಲಿ ಸ್ವತಃ ಅಧ್ಯಕ್ಷ ಮಹಮ್ಮದ್ ಶರೀಫ್, ಮುಖ್ಯಾಧಿಕಾರಿ ಲೀನಾಬ್ರಿಟ್ಟೊ ಸಹಿತ ಆಡಳಿತದ ಪಕ್ಷದ ಸದಸ್ಯರು ಅವರ ಮನವೊಲಿಸುವ ಪ್ರಯತ್ನ ನಡೆಸಿದರೂ ನಾವು ಸಭೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಆಡಳಿತ ಪಕ್ಷದ ಸದಸ್ಯರೇ ಸಭೆ ಮುಂದುವರೆಸಿದರು. ಕೆಲ ಹೊತ್ತಿನ ಬಳಿಕ ವಿಪಕ್ಷ ಸದಸ್ಯ ಹರಿಪ್ರಸಾದ್ ಆಗಮಿಸಿ ಅಧ್ಯಕ್ಷರಿಗೆ ಪತ್ರವೊಂದನ್ನು ನೀಡಿದರು. ಅದೇ ವೇಳೆಗೆ ಸಭಾತ್ಯಾಗ ಮಾಡಿದ್ದ ಗೋವಿಂದ ಪ್ರಭು ಸಹಿತ ವಿಪಕ್ಷ ಸದಸ್ಯರೆಲ್ಲರೂ ಆಗಮಿಸಿ ಸಭೆಯಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *