Header Ads
Header Ads
Breaking News

ಬಂಟ್ವಾಳ: ಸರಕಾರಿ ಕಾರ್ಯಕ್ರಮಕ್ಕೆ ಪಕ್ಷದ ಚಿಹ್ನೆ ಉಪಯೋಗ ಹಿನ್ನೆಲೆ ಆರೋಪ

 ಸರಕಾರಿ ಕಾರ್ಯಕ್ರಮಗಳಲ್ಲಿ ಪಕ್ಷವೊಂದರ ಚಿಹ್ನೆ ಹಾಕಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎನ್ನುವ ಆರೋಪವೊಂದು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಸಮರಕ್ಕೆ ಅವಕಾಶ ಮಾಡಿಕೊಟ್ಟ ಘಟನೆ ಬಂಟ್ವಾಳ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಡೆಯಿತು.ಆಡಳಿತ ಪಕ್ಷದ ಸದಸ್ಯೆ ಮಲ್ಲಿಕಾ ವಿ ಶೆಟ್ಟಿ ಮಾತನಾಡಿ ಇತ್ತೀಚೆಗೆ ಗ್ರಾಮಪಂಚಾಯಿತಿನಲ್ಲಿ ನಡೆದ 94ಸಿ ಹಕ್ಕು ಪತ್ರ ವಿತರಣ ಕಾರ್ಯಕ್ರಮದಲ್ಲಿ ಪಕ್ಷವೊಂದರ ಚಿಹ್ನೆಯನ್ನು ಹಾಕಲಾಗಿತ್ತು. ಸರಕಾರಿ ಕಾರ್ಯಕ್ರಮದಲ್ಲಿ ಪಕ್ಷ ಚಿಹ್ನೆ ಹಾಕುವುದು ಕಾನೂನು ವಿರೋಧಿ ಎಂದು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಇದೊಂದು ಗಂಭೀರವಾದ ವಿಷಯ, ಸರಕಾರಿ ಕಾರ್ಯಕ್ರಮದಲ್ಲಿ ಯವುದೇ ಪಕ್ಷದ ಚಿಹ್ನೆಗಳನ್ನು ಹಾಕುವಂತಿಲ್ಲ, ಈ ಬಗ್ಗೆ ತಹಶೀಲ್ದಾರರು ಗಮನ ಹರಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದು ವಿಪಕ್ಷ ಸದಸ್ಯರನ್ನು ಕೆರಳಿಸಿತು. ತನ್ನ ಊರಿನಲ್ಲಿ ನಡೆದ ಹಕ್ಕು ಪತ್ರ ವಿತರಣ ಕಾರ್ಯಕ್ರಮದಲ್ಲಿ ಆಡಳಿತ ಪಕ್ಷದ ಸದಸ್ಯರ ಪಕ್ಷ ಚಿಹ್ನೆಯನ್ನು ಹಾಕಿ ಸರಕಾರಿ ಕಾರ್ಯಕ್ರಮ ಮಾಡಲಾಗಿತ್ತು ಎಂದು ವಿಪಕ್ಷ ನಾಯಕ ರಮೇಶ್ ಕುಡ್ಮೇರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾ ಶೆಟ್ಟಿ ಅಂತಹ ಘಟನೆ ನಡೆದಾಗಲೇ ನೀವು ಅದನ್ನು ಆಗಲೇ ಗಮನಕ್ಕೆ ತರಬೇಕಿತ್ತು ಎಂದರು. ಆಡಳಿತ ಹಾಗೂ ವಿಪಕ್ಷಗಳ ನಡುವೆ ಸುದೀರ್ಘ ಹೊತ್ತಿನ ಮಾತಿನ ಚಕಮಕಿ ನಡೆದು ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಯಾವುದೇ ಪಕ್ಷದ ಚಿಹ್ನೆ ಬಾರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೆರಾ ಸೂಚನೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದರು.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ ಬಂಗೇರ, ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.

Related posts

Leave a Reply