Header Ads
Breaking News

ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗಾಗಿ ಸ್ಮಾರ್ಟ್‌ಕ್ಲಾಸ್ ಸೌಲಭ್ಯ

ಬಂಟ್ವಾಳ: ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗಾಗಿ ಪ್ರತೀ ತರಗತಿಗೂ ಸ್ಮಾರ್ಟ್‌ಕ್ಲಾಸ್ ಸೌಲಭ್ಯ… ವಿದ್ಯಾರ್ಥಿಗಳು ಹಾಗೂ ಶಾಲೆಯ ಸುರಕ್ಷತೆಗಾಗಿ ಪ್ರತೀ ಕೊಠಡಿ ಹಾಗೂ ಶಾಲಾ ಆವರಣದಲ್ಲಿ ಸಿಸಿಟಿವಿ ಕಣ್ಗಾವಲು.. ಆದಾಯ ನೀಡುವ ಸೋಲಾರ್ ವ್ಯವಸ್ಥೆ.. ಶಾಲಾ ಅಂಗಣದಲ್ಲಿ ಹೂವಿನ ಗಿಡ, ಹಸಿರು ಉದ್ಯಾನದ ಅಲಂಕಾರ… ಹಣ್ಣು ಹಂಪಲಿನ ತೋಟದ ಚಿತ್ತಾರ…
ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎನ್ನುವಂತೆ ಸಮಗ್ರ ಅಭಿವೃದ್ದಿ ಸಾಧಿಸಿ ವಿನೂತನ ಪ್ರಯೋಗಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಕಂಡು ಬರುವ ಚಿತ್ರಣವಿದು.

ಶಿಸ್ತುಬದ್ದ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರ ನಿರಂತರ ಪರಿಶ್ರಮ, ಶಾಲಾಭಿವೃದ್ದಿಯ ಸಹಕಾರ, ಪೋಷಕರ ಬೆಂಬಲ ಇದ್ದರೆ ಸರಕಾರಿ ಶಾಲೆಯನ್ನೂ ಮಾದರಿ ಶಾಲೆಯಾಗಿ ರೂಪಿಸಲು ಸಾದ್ಯವಿದೆ ಎನ್ನವುದಕ್ಕೆ ಈ ಪ್ರೌಢಶಾಲೆ ನಿದರ್ಶನ. ಇಲ್ಲಿನ ಉಪಪ್ರಾಂಶುಪಾಲ ರಮಾನಂದ ಅವರ ಮುತುವರ್ಜಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಈ ಸರಕಾರಿ ಪ್ರೌಢಶಾಲೆಯಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ.ಸ್ಮಾರ್ಟ್ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಪ್ರತೀ ತರಗತಿಯಲ್ಲೂ ಸ್ಮಾರ್ಟ್ ಕ್ಲಾಸ್ ಅಳವಡಿಸಿಕೊಳ್ಳಲಾಗಿದೆ. ಬಂಟ್ವಾಳ ರೋಟರಿ ಕ್ಲಬ್‌ನ ಪ್ರಾಯೋಜಕತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗೆ ಇದು ಪ್ರಯೋಜಕಾರಿಯಾಗಿದೆ. ಎಲ್ಲಾ ವಿಷಯಗಳಿಗೂ ಸಂಬಂಧಿಸಿದ ಪಾಠಗಳನ್ನು ಸ್ಮಾರ್ಟ್ ಕ್ಲಾಸ್‌ನಲ್ಲಿ ನೀಡಲಾಗುತ್ತದೆ. ನೈಜ ದೃಶ್ಯಗಳ ಮೂಲಕ ವಿದ್ಯಾರ್ಥಿಗೆ ಸರಿಯಾಗಿ ಮನದಟ್ಟು ಆಗುವ ರೀತಿಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಟಿವಿ ಮೂಲಕ ಪಾಠ ಮಾಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲೀ ಎಲ್ಲಾ ತರಗತಿ ಕೊಠಡಿಯಲ್ಲೂ ಸ್ಮಾರ್ಟ್ ಕ್ಲಾಸ್ ಹೊಂದಿರುವ ಏಕೈಕ ಸರಕಾರಿ ಪ್ರೌಢಶಾಲೆ ಇದು ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಶಾಲೆಯ ಐದು ತರಗತಿ ಕೋಣೆಗಳಿಗೂ ಸ್ಮಾರ್ಟ್ ಕ್ಲಾಸ್‌ನ ಟಿವಿ ಅಳವಡಿಸಲಾಗಿದೆ. ವಿದ್ಯುತ್ ಕೈಕೊಟ್ಟಗಾಲೂ ಬ್ಯಾಟರಿ ಮೂಲಕ ಸ್ಮಾರ್ಟ್ ಕ್ಲಾಸ್ ನಡೆಯುತ್ತಿರುತ್ತದೆ, ಶಿಕ್ಷಕರು ತರಗತಿಗೆ ಬಾರದೇ ಇದ್ದರೂ ಸ್ಮಾಟ್ ಕ್ಲಾಬ್ ಕಲಿಕೆ ಸಾಗುತ್ತಿರುತ್ತದೆ.ಶಾಲೆಯ ಹೊರ ಆವರಣದಲ್ಲಿ ಹಸಿರು ಹುಲ್ಲುಗಳಿಂದ ಗಮನ ಸೆಳೆಯುವ ಆಕರ್ಷಕ ಗಾರ್ಡನ್ ನಿರ್ಮಿಸಲಾಗಿದೆ. ಗಣಿತ ಆಕೃತಿಗಳಾದ ವೃತ್ತ, ಆಯತ, ಚೌಕ, ಷಟ್ಕೋನ ಮೊದಲಾದ ರಚನೆಗಳನ್ನು ನಿರ್ಮಿಸಲಾಗಿದ್ದು ಅದರಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ದಾಸವಾಳ, ಗುಲಾಬಿ, ಸದಾಪುಷ್ಪ, ಬಿಳಿ ಕೇಪುಳ, ಕಳ್ಳಿಗಿಡ ಮೊದಲಾದ ಹೂವಿನ ಗಿಡಗಳು ಶಾಲೆಯ ಹೊರಾಂಗಣದ ಅಂದವನ್ನು ಹೆಚ್ಚಿಸಿದೆ. ಶಾಲೆಯ ಹಿಂಭಾಗ ಹಾಗೂ ಸುತ್ತಮುತ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಮಾವು, ಪೇರಳೆ, ಪುನರ್‌ಪುಳಿ, ರಾಂಬೂಟ, ಸಪೋಟ, ಮೋಸಂಬಿ, ಕಿತ್ತಳೆ, ಬಟರ್ ಪ್ರೂಟ್, ಚೈನೀಸ್ ಆರೆಂಜ್ ಮೊದಲಾದ ಹಣ್ಣಗಳ ಗಿಡಗಳು ತೋಟದಲ್ಲಿವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿಯನ್ನು ಇಲ್ಲಿ ಬೆಳೆಯಲಾಗುತ್ತದೆ.
ಪ್ರತೀ ತರಗತಿ ಕೋಣೆಗಳಿಗೂ ಸಿಸಿಟಿವಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಈ ವ್ಯವಸ್ಥೆ ಕಲ್ಪಿಸಲಾಗಿದ್ದು ಉತ್ತಮ ಗುಣಮಟ್ಟದ ಸಿಸಿಟಿವಿಗಳು ಇದಾಗಿವೆ. ಶಾಲೆಯ ಹೊರ ಆವರಣವೂ ಸಿಸಿ ಟಿವಿಯ ಕಣ್ಗಾವಲಿನಲ್ಲಿದೆ.ಶಾಲೆಯಲ್ಲಿ ಎರಡು ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ಒಂದು ಶಾಲೆಗೆ ವಿದ್ಯುತ್ ಪೂರೈಸಿದರೆ ಇನ್ನೊಂದು ಪ್ಯಾನೆಲ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತನ್ನು ಮೆಸ್ಕಾಂಗೆ ಮಾರಾಟ ಮಾಡಲಾಗುತ್ತಿದೆ. ಪ್ರತೀ ತಿಂಗಳು ಸರಾಸರಿ ೪೦೦ ಯುನಿಟ್ ವಿದ್ಯುತ್‌ನ ಹೊರ ಹರಿವು ಇದ್ದು ಅಂದಾಜು ೧ ಸಾವಿರ ರುಪಾಯಿ ಆದಾಯ ಶಾಲಾಭಿವೃದ್ದಿ ಸಮಿತಿ ಖಾತೆಯಲ್ಲಿ ಜಮಾ ಆಗುತ್ತಿದೆ. ಶಾಸಕ ರಾಜೇಶ್ ನಾಕ್ ಅವರ ಅನುದಾನದಡಿ ಹೊಸ ಕೊಳವೆ ಬಾವಿ ಕೊರೆಸಲಾಗಿದೆ. ಇದಲ್ಲದೆಯೂ ಬಾವಿ ಹಾಗೂ ಪಂಚಾಯಿತಿಯ ನಳ್ಳಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಎನ್‌ಎಸ್‌ಕ್ಯೂಎಫ್ ಯೋಜನೆಯಡಿ ಶಾಲೆಯ ಒಂಬತ್ತನೆ ತರಗತಿ ವಿದ್ಯಾರ್ಥಿಗಳಿಗೆ ಅಟೋಮೋಬೈಲ್ ಹಾಗೂ ಆರೋಗ್ಯ, ಸೌಂದರ್ಯದ ಬಗ್ಗೆ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ತೃತೀಯ ಭಾಷೆಗೆ ಪರ್ಯಾಯವಾಗಿ ಈ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ವಾಹನಗಳ ನಿರ್ವಹಣೆ, ಸರ್ವಿಸ್, ಆರೋಗ್ಯ, ಸ್ವಚ್ಚತೆಯ ಬಗ್ಗೆ ತರಬೇತಿ ಪಡೆದು ಭವಿಷ್ಯದಲ್ಲಿ ಸ್ವ ಉದ್ಯೋಗ ಪಡೆಯಲು ಇದು ದಾರಿದೀಪವಾಗಲಿದೆ. ಮಧ್ಯಾಹ್ನದ ಊಟದ ಬಿಡುವಿನ ಸಂದರ್ಭ ಸ್ಪೀಕರ್‌ಗಳ ಮೂಲಕ ರೇಡಿಯೋ ಕಾರ್ಯಕ್ರಮಗಳನ್ನು ಕೇಳಿಸಲಾಗುತ್ತಿದೆ.

 

ವಿದ್ಯಾರ್ಥಿಗಳ ಶಿಸ್ತು ಶಾಲೆಯ ಒಟ್ಟಂದಕ್ಕೆ ಗರಿ ಇಟ್ಟಂತಿದೆ. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗೆ ಪೂರಕವಾಗಿ ಇಂಟರಾಕ್ಟ್ ಕ್ಲಬ್, ಮತ ಕ್ಲಬ್, ಪ್ರೇರಣ ಕ್ಲಬ್, ಕಣಿತ ಕ್ಲಬ್ ಮತ್ತಿತರ ಕ್ಲಬ್‌ಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮುದ್ದೇನ ಹಳ್ಳಿಯ ಸತ್ಯಸಾಯಿ ಸೇವಾ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಹಾರ ನೀಡಲಾಗುತ್ತಿದೆ. ಶಾಲೆಯ ಪ್ರಗತಿಯನ್ನು ಗುರುತಿಸಿ ಕಳೆದೆರಡು ವರ್ಷಗಳಿಂದ ಪರಿಸರ ಮಿತ್ರ ಜಿಲ್ಲಾ ಹಸಿರು ಶಾಲೆ ಪ್ರಶಸ್ತಿ, ಜಿಲ್ಲಾ ಇಂಟರಾಕ್ಟ್ ಅವಾರ್ಡ್, ಗೋಲ್ಡನ್ ಗ್ಲೋಬ್ ಅವಾರ್ಡ್, ಐಡಿಯಲ್ ಸ್ಕೂಲ್ ಅವಾಡ್ ಪ್ರಶಸ್ತಿಗಳು ಬಂದಿದೆ.

Related posts

Leave a Reply

Your email address will not be published. Required fields are marked *