Header Ads
Header Ads
Breaking News

ಸಾರ್ವಜನಿಕ ಶಿಕ್ಷಣ ಇಲಾಖೆಯ ಗೊಂದಲದ ನಡವಳಿಕೆ

ಬಂಟ್ವಾಳ: ಆಂಗ್ಲಮಾಧ್ಯಮದಲ್ಲಿ ಪಾಠ ಬೋದಿಸಿ, ಆಂಗ್ಲ ಮಾಧ್ಯಮದಲ್ಲಿಯೇ ನೋಟ್ಸ್ ಬರೆಯಿಸಿ ಪರೀಕ್ಷೆಗೆ ಮಾತ್ರ ಕನ್ನಡ ಮಾಧ್ಯಮದ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ, ಕನ್ನಡದಲ್ಲೇ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹೇರಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಗೊಂದಲದ ನಡವಳಿಕೆಯ ವಿರುದ್ದ ದಡ್ಡಲಕಾಡು ಶಾಲೆಯ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.


ವಿದ್ಯಾರ್ಥಿಗಳು ಶನಿವಾರದ ಪರೀಕ್ಷೆ ಬಹಿಷ್ಕರಿಸಿದರು. ಪೋಷಕರೊಂದಿಗೆ ಸೇರಿ ಶಾಲಾ ಜಗಲಿಯಲ್ಲಿಯೇ ಧರಣಿ ಆರಂಭಿಸಿ ಶಿಕ್ಷಣ ಇಲಾಖೆಯ ಧೋರಣೆಯನ್ನು ಖಂಡಿಸಿದರು. ದಡ್ಡಲಕಾಡು ಶಾಲೆಯ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪದೇ ಪದೇ ಚೆಲ್ಲಾಟವಾಡುತ್ತಿದೆ. ಶಿಕ್ಷಣ ಇಲಾಖೆಯ ಈ ದೌರ್ಜನ್ಯ ನೀತಿಯ ವಿರುದ್ದ ನ್ಯಾಯ ಸಿಗುವರೆಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ ಪ್ರತಿಭಟನೆಗೆ ಸಾಥ್ ನೀಡಿದರು.
ವಿದ್ಯಾರ್ಥಿಗಳ ಪೋಷಕರು ಸುದ್ದಿಗಾರರೊಂದಿಗೆ ಮಾತನಾಡಿ ಹೈ ಕೋರ್ಟ್ ಆದೇಶದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಂಗ್ಲಭಾಷೆಯ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ, ಆಂಗ್ಲ ಭಾಷೆಯಲ್ಲಿಯೇ ಪಾಠಗಳನ್ನು ಭೋದಿಸಿ ಪರೀಕ್ಷೆಗೆ ಮಾತ್ರ ಕನ್ನಡ ಮಾಧ್ಯಮದ ಪ್ರಶ್ನೆ ಪತಿಕೆಗಳನ್ನು ವಿತರಿಸಲು ಸಿದ್ದತೆ ನಡೆಸಿರುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಶಾಲಾಭಿವೃದ್ದಿ ಸಮಿತಿಗಾಗಲಿ, ಶಾಲೆ ದತ್ತು ಸ್ವೀಕರಿಸಿದ ಸಂಸ್ಥೆಯ ಗಮನಕ್ಕೆ ತಾರದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕಗ್ಷಣ ಇಲಾಖೆಯೇ ಕೊಡಲಿ ಪೆಟ್ಟು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಲಾ ವಿದ್ಯಾರ್ಥಿಗಳು ಮಾತನಾಡಿ ಶುಕ್ರವಾರ ನಡೆದ ಕನ್ನಡ ಮತ್ತು ಆಂಗ್ಲ ಭಾಷಾ ಪರೀಕ್ಷೆಗೆ ಸರಿಯಾಗಿ ಪ್ರಶ್ನೆ ಪತ್ರಿಕೆ ನೀಡಿದ್ದಾರೆ. ಆದರೆ ಇಂದು ನಡೆಯುವ ಗಣಿತ ಮತ್ತು ಪರಿಸರ ವಿಜ್ಞಾನ ಪರೀಕ್ಷೆಗೆ ಕನ್ನಡ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆ ನೀಡಿದ್ದಾರೆ. ಇಂಗ್ಲೀಷ್‌ನಲ್ಲಿ ಅಧ್ಯಯನ ಮಾಡಿ ಕನ್ನಡ ಮಾಧ್ಯಮದಲ್ಲಿ ಬರೆಯಲು ನಮಗೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಕರೆಂಕಿ, ಮಾಜಿ ಅಧ್ಯಕ್ಷ ಪೂವಪ್ಪ ಮೆಂಡನ್, ಪುರುಷೋತ್ತಮ ಅಂಚನ್ ಮತ್ತಿತರರು ಹಾಜರಿದ್ದರು.