Header Ads
Header Ads
Header Ads
Breaking News

ಬಂಡೆಗಳ ಮಧ್ಯದಿಂದ ಜುಳುಜುಳು ನಿನಾದ… ನದಿ ಕಿನಾರೆಯಿಂದ ಬೀಸಿ ಬರುವ ತಂಗಾಳಿ… ಬಂಟ್ವಾಳದ ಟ್ರೀಪಾರ್ಕ್‌ನಲ್ಲಿ ವಿಶಿಷ್ಠ ಅನುಭವ ನೀಡಲಿರುವ ದೃಶ್ಯ

 

ಬಂಟ್ವಾಳ: ಬಂಡೆಗಳ ಮಧ್ಯದಿಂದ ಜುಳುಜುಳು ನಿನಾದಗೈಯ್ಯುತ್ತಾ ಹರಿಯುವ ನದಿ…ನದಿ ಕಿನಾರೆಯಿಂದ ಬೀಸಿ ಬರುವ ತಂಗಾಳಿ… ಪ್ರಕೃತಿಯ ಈ ರಮಣೀಯ ಸೌಂದರ್ಯವನ್ನು ಆಸ್ವಾಧಿಸಿಕೊಳ್ಳುತ್ತಿದ್ದರೆ ಮನಸ್ಸಿಗೇನೋ ಉಲ್ಲಾಸ, ಉತ್ಸಾಹ.. ಇದು ಕಂಡು ಬಂದಿರುವುದು ಬಂಟ್ವಾಳ ತಾಲೂಕಿನಲ್ಲಿ…

ಕಾಂಕ್ರೀಟ್ ಕಾಡುಗಳೇ ತುಂಬಿರುವ ಈ ಕಾಲಘಟ್ಟದಲ್ಲಿ ಇಂತಹ ದೃಶ್ಯ ನೋಡಲು ಇನ್ನುಮುಂದೆ ಎಲ್ಲಿಯೋ ದೂರದ ಊರಿಗೆ ಹೋಗಬೇಕಿಲ್ಲ. ಬದಲಾಗಿ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ಕಿನಾರೆಯಲ್ಲಿ ಈ ರೋಮಾಂಚನವನ್ನು ಅನುಭವಿಸಬಹುದು. ಬಂಟ್ವಾಳದ ಪ್ರವಾಸಿ ಬಂಗಲೆಯ ಮುಂಭಾಗದಲ್ಲಿ ಅರಣ್ಯ ಇಲಾಖೆ ನಿರ್ಮಿಸುತ್ತಿರುವ ಟ್ರೀಪಾರ್ಕ್ ಇಂತಹ ವಿಶಿಷ್ಟ ಅನುಭವ ನೀಡಿಲಿದೆ.
ಇದು ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಕನಸಿನ ಯೋಜನೆ. ಬಿ.ಸಿ.ರೋಡು ಮುಖ್ಯವೃತ್ತದ ಬಳಿ ಕಸದ ಕೊಂಪೆಯಾಗಿ ದುರ್ನಾತ ಬೀರುತ್ತಿದ್ದ ಜಾಗ ಈಗ ಜನಾರ್ಷಣೆ ಪಡೆದಿರುವ ಜೋಡುಮಾರ್ಗ ಉದ್ಯಾನವನವಾದಂತೆ, ಸಾಗುವಾಣಿ ಮರಗಳ ಮಧ್ಯೆ ಕಳೆ ಗಿಡಗಳು ಬಿದ್ದು ನಿಷ್ಪ್ರಯೋಜಕವಾಗಿದ್ದ ಇಳಿಜಾರು ಜಾಗ ಇದೀಗ ಸುಂದರ ಟ್ರೀ ಪಾರ್ಕ್ ಆಗಿ ಕಂಗೊಳಿಸುತ್ತಿದೆ. ಸುಮರು ಮೂರು ಎಕರೆ ವಿಸ್ತೀರ್ಣದ ಪಿಡಬ್ಲ್ಯುಡಿ ಇಲಾಖೆಯ ಜಮೀನಿನಲ್ಲಿ ಸುಮಾರು ೩೫ ಲಕ್ಷ ರುಪಾಯಿ ವೆಚ್ಚದದಲ್ಲಿ ಈ ಟ್ರೀ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ.

 

ಜಿಲ್ಲೆಯ ಜೀವನದಿ ನೇತ್ರಾನದಿ ವೈಯಾರದಿಂದ ಹರಿಯುವ ದೃಶ್ಯವನ್ನು ಇಲ್ಲಿ ಮನಸೋ ಇಚ್ಛೆ ಆಸ್ವಾದಿಸಬಹುದಾಗಿದೆ. ನೇತ್ರಾವತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪೂರಕವಾಗುವ ನಿಟ್ಟಿನಲ್ಲಿಯೇ ಟ್ರೀಪಾರ್ಕ್‌ನಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಪಾರ್ಕ್‌ನ ಮಧ್ಯೆ ಉಪ್ಪರಿಗೆ ಮನೆಯನ್ನು ನಿರ್ಮಿಸಲಾಗಿದ್ದು ಸುತ್ತಲು ಬೆಂಚುಗಳನ್ನು ಅಳವಡಿಸಲಾಗಿದೆ. ಅಲ್ಲಿಂದಲೇ ಭೋರ್ಗರೆಯುವ ನದಿಯ ಸೊಬಗನ್ನು ಸವಿಯಬಹುದು. ಪಾರ್ಕಿನ ಒಳ ಹಾಗೂ ಹೊರಭಾಗದಲ್ಲಿ ಅಲ್ಲಲ್ಲಿ ಕಲ್ಲು ಬೆಂಚುಗಳನ್ನು ಅಳವಡಿಸಲಾಗಿದೆ. ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಡಲಾಗಿದ್ದು ಜನರ ಗಮನ ಸೆಳೆಯುತ್ತದೆ.

ಮಕ್ಕಳಿಗಾಗಿ ಪ್ರತ್ಯೇಕ ಪಾರ್ಕ್ ಇದ್ದು ಜೋಕಾಲಿ ಮೊದಲಾದ ಆಟದ ವಸ್ತುಗಳನ್ನು ಅಳವಡಿಸಲಾಗವುದು. ಟ್ರೀ ಪಾರ್ಕ್‌ನ ಒಳಗೆ ಹಾಗೂ ಹೊರ ಭಾಗದಲ್ಲಿ ಇಂಟರ್‌ಲಾಕ್ ಅಳವಡಿಸಿದ ವಾಕ್‌ಪಾಥ್ ನಿರ್ಮಿಸಲಾಗಿದೆ. ಪ್ರವೇಶ ದ್ವಾರದ ಬಳಿ ಈ ಹಿಂದೆಯೇ ಇದ್ದ ಹಳೆ ಆಲದ ಮರಕ್ಕೆ ಸುಂದರವಾದ ಕಟ್ಟೆಯನ್ನು ನಿರ್ಮಿಸಿ ವಾಲ್‌ಪೈಂಟಿಂಗ್ ಮಾಡಲಾಗಿದೆ. ಈ ಹಿಂದೆ ಇದ ಎಲ್ಲಾ ಸಾಗುವಾನಿ ಮರಗಳನ್ನು ಯತಾಸ್ಥಿತಿಯಲ್ಲಿ ಉಳಿಸಲಾಗಿದ್ದು ನೆರಳಿಗೆ ಆಶ್ರಯವಾಗಿದೆ. ನದಿ ಕಿನಾರೆಯಲ್ಲಿ ಟ್ರೀಪಾರ್ಕ್ ಇರವುದರಿಂದ ಬಲಿಷ್ಟವಾದ ರಕ್ಷಣಾ ಬೇಲಿಗಳನ್ನು ನಿರ್ಮಿಸಲಾಗಿದೆ. ಆಯುರ್ವೇದ ತೋಟ ನಿರ್ಮಿಸುವ ಮೂಲಕ ಔಷದೀಯ ಗಿಡಗಳ ರಕ್ಷಣೆಗೂ ಟ್ರೀಪಾರ್ಕ್ ನೆರವಾಗಲಿದೆ. ಬಂಟ್ವಾಳದ ನಾಗರಿಕರು ಇನ್ನು ಮುಂದೆ ತಮ್ಮ ಬಿಡುವಿನ ವೇಳೆಯನ್ನು ಟ್ರೀಪಾರ್ಕ್‌ನಲ್ಲಿ ಕಳೆಯಬಹುದಾಗಿದೆ.

ಭಾಗಶಃ ಕಾಮಗಾರಿಗಳು ಪೂರ್ಣಗೊಂಡಿದ್ದು ಕೆಲ ಕೆಲಸಗಳಷ್ಟೇ ಬಾಕಿ ಉಳಿದಿದೆ. ಬಂಟ್ವಾಳದಲ್ಲಿ ಮಿನಿ ವಿಧಾನಸೌಧ, ಕೆ‌ಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ, ಮೆಸ್ಕಾಂ ಕಚೇರಿ, ಪ್ರವಾಸಿ ಬಂಗಲೆಗಳ ಕಾಮಗಾರಿ ಪೂರ್ಣಗೊಂಡಿದ್ದು ಅವುಗಳ ಉದ್ಘಾಟನೆಯ ಸಂದರ್ಭವೇ ಟ್ರೀಪಾರ್ಕ್ ಕೂಡ ಲೋಕಾರ್ಪಣೆಗೊಳ್ಳಲಿದೆ.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply