Header Ads
Breaking News

ಬಡ ಕುಟುಂಬಕ್ಕೆ ದಾರಿದೀಪವಾದ ಯುವ ವೇದಿಕೆ-ಸಜೀಪಮೂಡದ ಮಹಿಳೆಯ ಮನೆ ಪುನರ್‌ ನವೀಕರಣ

ಬಂಟ್ವಾಳ: ಕೋವಿಡ್ ಲಾಕ್‌ಡೌನ್‌ನ ಬಿಡುವಿನ ವೇಳೆಯನ್ನು ಬಂಟ್ವಾಳದ ಕುಲಾಲ, ಕುಂಬಾರರ ಯುವವೇದಿಕೆಯ ತಂಡ ಸಜೀಪಮೂಡ ಗ್ರಾಮದ ಬಡ ಮಹಿಳೆಯೊರ್ವರಿಗೆ ಮನೆ ಪುನರ್‌ನವೀಕರಿಸಿ ಕೊಡುವ ಮೂಲಕ ಸದ್ಬಳಕೆ ಮಾಡಿಕೊಂಡಿದೆ. ಸ್ವಂತ ಮನೆ ಇದ್ದರೂ, ಬಾಡಿಗೆ ಮನೆಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದ ಕುಲಾಲ ಸಮುದಾಯದ ಮಹಿಳೆಗೆ ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದೆ. 

ಮಣಿನಾಲ್ಕೂರು ಗ್ರಾಮದ ಕುಂಟಾಲಪಲ್ಕೆ ಎಂಬಲ್ಲಿ ಜೋಪಡಿಯಂತಹ ಬಾಡಿಗೆ ಮನೆಯಲ್ಲಿ ಕಮಲ ಎಂಬವರು ಕೂಲಿ ಕೆಲಸ ಮಾಡಿಕೊಂಡು ತನ್ನಿಬ್ಬರು ಮಕ್ಕಳೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡದುಕೊಂಡ ಸ್ಥಳೀಯ ಯುವಕರ ತಂಡ ಇವರಿಗೆ ನೆರವಾಗುವ ಉದ್ದೇಶದಿಂದ ಪರ್ಯಾಯ ಮನೆ ಕಲ್ಪಿಸುವ ಚಿಂತನೆಯಲ್ಲಿದ್ದರು. ಈ ವಿಚಾರವನ್ನು ಬಂಟ್ವಾಳ ತಾಲೂಕು ಕುಲಾಲ, ಕುಂಬಾರರ ಯುವ ವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅವರ ಗಮನಕ್ಕೆ ತಂದಿದ್ದರು. ವೇದಿಕೆಯ ಇತರ ಸದಸ್ಯರೊಂದಿಗೆ ಮಹಿಳೆಯನ್ನು ಭೇಟಿ ಮಾಡಿ ವಿಚಾರಿಸಿದಾಗ ಸಜೀಪಮೂಡ ಗ್ರಾಮದ ಕಂದೂರು ಬಳಿ ಸ್ವಂತ ಜಮೀನು ಹಾಗೂ ಮನೆಯಿದ್ದು ಅದು ಜೀರ್ಣವಸ್ಥೆಯಲ್ಲಿರುವ ಬಗ್ಗೆ ತಿಳಿದು ಬಂತು. ತಕ್ಷಣ ಕಾರ್ಯಪ್ರವೃತ್ತರಾದ ಯುವ ವೇದಿಕೆಯ ಸದಸ್ಯರು ದಾನಿಗಳ ಸಹಕಾರದೊಂದಿಗೆ ಶ್ರಮದಾನದ ಮೂಲಕ ಮನೆಯನ್ನು ದುರಸ್ತಿ ಪಡಿಸಿ ಕೊಡುವ ಬಗ್ಗೆ ತೀರ್ಮಾನಿಸಿದ್ದರು. ಕಳೆದ ಮೇ 7 ರಂದು ಶ್ರಮದಾನ ಆರಂಭಿಸಿ ಸುಟ್ಟು ಹೋಗಿದ್ದ ಮನೆಯ ಮರದ ಛಾವಣಿಯನ್ನು ತೆರವುಗೊಳಿಸಿ, ಮನೆ ಪರಿಸರವನ್ನು ಸ್ವಚ್ಛಗೊಳಿಸಿದ್ದರು. ಮೇ 10 ಭಾನುವಾರ ಮತ್ತೆ ಯುವಕರ ತಂಡ ಶ್ರಮದಾನದ ಮೂಲಕ ಮನೆ ನವೀಕರಣ ಕೆಲಸ ಆರಂಭಿಸಿದೆ. ಇದೀಗ ಮನೆಯ ಛಾವಣಿ ದುರಸ್ತಿಯ ಜೊತೆಗೆ ಅಡುಗೆ ಕೋಣೆ ನಿರ್ಮಾಣ, ಕೊಠಡಿ ನಿರ್ಮಾಣ, ಶೌಚಾಲಯಯವನ್ನು ನಿರ್ಮಿಸಿಕೊಡಲು ಯೋಜನೆ ರೂಪಿಸಿದೆ. ಮನೆಯ ಹಿಂಭಾಗದಲ್ಲಿ ಪಂಚಾಂಗ ಹಾಗೂ ಶೌಚಾಲಯದ ಪಿಟ್ ನಿರ್ಮಾಣ ಕಾರ್ಯವನ್ನು ಭಾನುವಾರ ನಡೆಸಲಾಗಿದೆ. ಮಹಿಳೆಗೆ ಆರಂಭದಲ್ಲಿ ನೆರವು ನೀಡಲು ಮುಂದಾಗಿದ್ದ ಕುಂಟಾಲಪಲ್ಕೆಯ ಯುವಕರ ತಂಡ 30,150 ರೂಪಾಯಿ ದೇಣಿಯ ಚೆಕ್ ಹಸ್ತಾಂತರಿಸಿದೆ ಜೊತೆಗೆ ಶ್ರಮದಾನದಲ್ಲೂ ಕೈ ಜೋಡಿಸಿದೆ.
ಮಹಿಳೆಯ ಬದುಕಿನ ಕರಾಳ ಕಥೆ:
ಕಮಲ ಅವರು ಸಜೀಪಮೂಡ ಗ್ರಾಮದ ಕಂದೂರಿನಲ್ಲಿ ತನ್ನ ತಾಯಿ ಮನೆಯವರ ಕಡೆಯಿಂದ ಸಿಕ್ಕಿದ್ದ 8 ಸೆಂಟ್ಸ್ ಜಮೀನಿನಲ್ಲಿ ಆಶ್ರಯಯೋಜನೆಯಡಿ ಸಣ್ಣ ಮನೆಯನ್ನು ಕಟ್ಟಿಕೊಂಡು ಪತಿಯ ಜೊತೆ ಜೀವನ ನಡೆಸುತ್ತಿದ್ದರು. ಕಾಲಕ್ರಮೇಣ ಕುಡಿತದ ಚಟಕ್ಕೆ ಬಲಿಬಿದ್ದ ಪತಿ, ಪತ್ನಿ ಹಾಗೂ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಪತಿಯ ಕಿರುಕುಳವನ್ನು ಸಹಿಸಿಕೊಂಡು ಯಾತನಮಯ ಬದುಕು ನಡೆಸುತ್ತಿದ್ದುದನ್ನು ಗಮನಿಸಿದ ಅವರ ಸಹೋದರಿ ಮಣಿನಾಲ್ಕೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ವ್ಯವಸ್ಥೆ ಕಲ್ಪಿಸಿಕೊಟ್ಟರು. ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ, ಗೇರು ಬೀಜದ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಾ ಅಲ್ಪ ಆದಾಯದಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಕಮಲ ಸಂಕಷ್ಟದ ಜೀವನ ನಡೆಸುತ್ತಿದ್ದರು. ಇತ್ತ ಪತಿ, ಮಡದಿ ಮನೆಬಿಟ್ಟು ಹೋದ ಕೋಪದಲ್ಲಿ ಮನೆಯ ಛಾವಣಿಗೆ ಬೆಂಕಿ ಹಚ್ಚಿ ತೆರಳಿದ್ದರು. ಇದರಿಂದಾಗಿ ಮರದ ಛಾವಣಿ ಸಂಪೂರ್ಣ ಸುಟ್ಟು ಕರಲಾಗಿತ್ತು. ಕುಡಿತದ ದುರಾಭ್ಯಾಸವನ್ನು ಹೆಚ್ಚಿಸಿಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಸಂಬಂಧಿಕರ ಮನೆಯಲ್ಲಿಯೇ ಇದ್ದು ಕೊಂಡು ಕೊನೆಯುಸಿರೆಳೆದಿದ್ದರು. ಸ್ವಂತ ಮನೆಯಿದ್ದರೂ ಅಲ್ಲಿ ಬಾಳಲು ಸಾಧ್ಯವಾಗದೆ ಕಳೆದ ನಾಲ್ಕೈದು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಮಲ ಅವರ ಯಾಥನಮಯ ಬದುಕಿಗೆ ಬಂಟ್ವಾಳ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಸ್ಥಳೀಯ ಯುವಕರ ತಂಡ ಮುಕ್ತಿ ನೀಡಿದೆ. ಮನೆ ಪುನರ್ ನವೀಕರಿಸಿಕೊಡುವ ಮೂಲಕ ಬಡ ಕುಟುಂಬಕ್ಕೆ ದಾರಿ ದೀಪವಾಗಿದೆ.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply

Your email address will not be published. Required fields are marked *