Header Ads
Header Ads
Breaking News

ಬಡ ಹೆಣ್ಮಕ್ಕಳ ವಿವಾಹ ನೆರವೇರಿಸುವ ಕಾರ್ಯ ಪವಿತ್ರವಾದದ್ದು:ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಉಳ್ಳಾಲ: ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳನ್ನು ಗುರುತಿಸಿ ಅವರಿಗೆ ವಿವಾಹ ನೆರವೇರಿಸುವ ಕಾರ್ಯ ಪವಿತ್ರವಾದ ಕೆಲಸ. ಎಷ್ಟೋ ಜನ ಮದುವೆಗಾಗಿ ಸಾಲ ಮಾಡಿ ಇಡೀ ಜೀವನವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ಇದೆ. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ತನ್ನ ಅಧಿಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಹೆಣ್ಮಕ್ಕಳಿಗೆ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಜನಾಡಿ ನರಿಂಗಾನದ ಅಲ್ ಮದೀನಾ ಸಂಸ್ಥೆಯ ಬೆಳ್ಳಿಹಬ್ಬ ಪ್ರಯುಕ್ತ ನಡೆದ ೨೫ ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಾದಿ ಭಾಗ್ಯ ಯೋಜನೆಯನ್ನು ಯಡಿಯೂರಪ್ಪ ಮತ್ತು ಶೋಭಾ ಅವರು ವಿರೋಧಿಸಿದ್ದರು. ಬಡ ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ-ಪಂಗಡದವರ ಮತ್ತು ಹಿಂದುಳಿದವರ ಕೆಲಸ ಮಾಡುವಾಗ ನಾನು ಯಾರಿಗೂ ಹೆದರುವುದಿಲ್ಲ. ನನಗೆ ಶಕ್ತಿ ಕೊಟ್ಟವರು ಅವರೇ ಆಗಿದ್ದಾರೆ. ದುರ್ಬಲ ಜನರಿಗೆ ಶಕ್ತಿ ತುಂಬುವ ಕೆಲಸ ಸರಕಾರದ ಜವಾಬ್ದಾರಿಯಾಗಿದೆ. ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ ನಾಡಿನ ಸಂಪತ್ತನ್ನು ಬಡವರಿಗೆ ವಿನಿಯೋಗಿಸುವ ಪ್ರಯತ್ನ ಆಗಿದೆ. ಸಂವಿಧಾನದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ ಅಲ್ ಮದೀನಾ ಸಂಸ್ಥೆ ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸುತ್ತಲಿನ ಮಕ್ಕಳನ್ನು ಹೆತ್ತವರ ಆಸ್ತಿ ಮಾತ್ರವಲ್ಲ, ಸಮಾಜದ ಆಸ್ತಿಯನ್ನಾಗಿ ಮಾರ್ಪಾಡು ಮಾಡಿದ್ದಾರೆ. ಹಿಂದೆ ಭೇಟಿ ಸಂದರ್ಭ ಸರಕಾರದಿಂದ ೧ಕೋಟಿ ರೂ. ಅನುದಾನ ಒದಗಿಸಿಕೊಡುವ ಭರವಸೆಯಂತೆ ಅನುಮೋದನೆಯನ್ನು ರಾಜ್ಯ ಸರಕಾರ ಮಾಡಿತ್ತು ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಕೋಮುವಾದಿಗಳ ಕಣ್ಣು ಕೆಂಪಗಾಗಿಸಿದ ಏಕೈಕ ನಾಯಕ ಸಿದ್ದರಾಮಯ್ಯ. ಎಲ್ಲರ ಮನಸ್ಸಿಗೆ ಪ್ರೀತಿ, ಮನುಷ್ಯರ ನಡುವೆ ವಿಶ್ವಾಸ ಮಾಡುವ ಕೆಲಸವನ್ನು ಭಗವಂತ ಎಲ್ಲರಿಗೂ ದಯಪಾಲಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೆನೆಪೊ?ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ. ಅಬ್ದುಲ್ಲಾ ಕುಂಞಿ ಹಾಗೂ ಮಮ್ತಾಝ್ ಆಲಿ ಖಾನ್ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಮುಖ್ಯಸ್ಥ ಅಬ್ಬಾಸ್ ಮುಸ್ಲಿಯಾರ್, ಓಮನ್ ಪೊಲೀಸರ ಮುಖ್ಯಸ್ಥ ಸೈಯದ್ ರಸೂರಿ, ಅಲ್ ಹಝ್ರತ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು, ಎ.ಎ. ಹೈದರ್ ಪರ್ತಿಪ್ಪಾಡಿ, ಇಬ್ರಾಹಿಂ ಕೋಡಿಜಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಶಾಫಿ ಸಅದಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Related posts

Leave a Reply