Header Ads
Header Ads
Breaking News

ಬರಗಾಲದ ಸಂಜೀವಿನ ಸಿರಿಧಾನ್ಯಗಳ ಬಗ್ಗೆ ಅರಿವು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಇಂಥ ಪ್ರಯತ್ನ ನವ ಧಾನ್ಯಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ಸವಿದ ಕರಾವಳಿ ಜನತೆ

ಬರಗಾಲದ ಸಂಜೀವಿನ ಸಿರಿಧಾನ್ಯಗಳ ಬಗ್ಗೆ ಅರಿವು ಇರುವವರು ವಿರಳವೇ. ಅದರಲ್ಲೂ ಕರಾವಳಿ ಭಾಗದ ಜನರಿಗೆ ಈ ಧಾನ್ಯಗಳ ಕುರಿತು ಅಷ್ಟಾಗಿ ತಿಳಿದಿಲ್ಲ. ಈ ಧಾನ್ಯಗಳನ್ನು ಕರಾವಳಿಯ ಜನತೆಗೂ ಪರಿಚಯಿಸಬೇಕು ಎನ್ನುವ ಉದ್ಧೇಶದಿಂದ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಇಂಥ ಒಂದು ಪ್ರಯತ್ನವನ್ನು ಪುತ್ತೂರಿನಲ್ಲಿ ಮಾಡಿದೆ. ನವ ಧಾನ್ಯಗಳಿಂದ ಮಾಡಿದ ನಾನಾ ರೀತಿಯ ಆಹಾರ ಪದಾರ್ಥಗಳನ್ನು ಸವಿದ ಕರಾವಳಿ ಜನ ಸಿರಿಧಾನ್ಯಗಳ ರುಚಿಗೆ ಮನಸೋತರು.  

ನವಧಾನ್ಯಗಳಲ್ಲಿ ರಾಗಿ,ಜೋಳ,ನವಣೆ ಈ ಮೂರು ಧಾನ್ಯಗಳ ಪರಿಚಯವಿರುವ ಕರಾವಳಿಗರಿಗೆ ಉಳಿದ ಆರು ಧಾನ್ಯಗಳ ಮಾಹಿತಿ ಪಡೆದುಕೊಳ್ಳುವ ಸದಾವಕಾಶ ಪುತ್ತೂರಿನಲ್ಲಾಗಿದೆ. ಧರ್ಮಸ್ಥಳ ಸಿರಿ ಗ್ರಾಮೋಧ್ಯೋಗ ಸಂಸ್ಥೆ ಆಶ್ರಯದಲ್ಲಿ ನಡೆದ ಈ ವಿನೂತನ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಲಾಭವನ್ನೂ ತಿಳಿದುಕೊಂಡರು. ಸಿರಿಧ್ಯಾನಗಳಾದ ಸಜ್ಜೆ, ಬರಗು, ಕೊರಲೆ, ಸಾಮೆ, ಊದಲು ಮತ್ತು ಹಾರಕ ಎನ್ನುವ ಹೆಸರನ್ನು ಈ ಕಾರ್ಯಕ್ರಮದಲ್ಲೇ ಕೇಳಿದ ಜನರ ಸಾಲೇ ಹೆಚ್ಚಾಗಿತ್ತು. ಅದರಲ್ಲೂ ಈ ಎಲ್ಲಾ ಧಾನ್ಯಗಳನ್ನು ಉಪಯೋಗಿಸಿ ತಯಾರಿಸಲಾದ ರುಚಿ-ರುಚಿಯಾದ ಆಹಾರ ಪದಾರ್ಥಗಳೂ ಕರಾವಳಿ ಭಾಗದ ಜನರನ್ನು ಸಿರಿಧಾನ್ಯದ ಕಡೆಗೆ ವಾಲುವಂತೆಯೂ ಮಾಡಿದೆ. ಕೇಸರಿ ಬಾತ್, ಪೇಡ, ಚಕ್ಕಲಿ, ಪಾಯಸ, ಹೋಳಿಗೆ, ಅನ್ನ, ದೋಸೆ, ಚಪಾತಿ ಹೀಗೆ ಇಲ್ಲಿರುವ ಎಲ್ಲಾ ಖಾದ್ಯಗಳೂ ಇದೇ ಸಿರಿಧಾನ್ಯಗಳಿಂದಲೇ ತಯಾರಿಸಲ್ಪಟ್ಟಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯುವ ಈ ಸಿರಿಧಾನ್ಯಗಳ ಬಳಕೆದಾರರು ಇದರ ಕುರಿತ ಮಾಹಿತಿಯನ್ನೂ ಜನತೆಯಲ್ಲಿ ಹಂಚಿಕೊಂಡರು.

ಭತ್ತದ ಅನ್ನ ಬಿಟ್ಟರೆ ಅಪರೂಪಕ್ಕೆ ರಾಗಿ ಅನ್ನವನ್ನು ಸವಿಯುವ ಕರಾವಳಿಗರ ಪಾಲಿಗೆ ಪುತ್ತೂರಿನಲ್ಲಿ ನಡೆದ ಸಿರಿಧಾನ್ಯಗಳ ಆಹಾರ ಮೇಳ ವಿಶೇಷ ಅನುಭವವನ್ನೂ ನೀಡಿತ್ತು. ಸಿರಿಧಾನ್ಯಗಳ ಉಪಯೋಗ ಹಾಗೂ ಅದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಬದಲಾವಣೆಯ ಬಗ್ಗೆ ಮಾಹಿತಿ ಪಡೆದಿದ್ದ ಕರಾವಳಿಯ ಜನರಿಗೆ ಪುತ್ತೂರಿನ ಈ ಮೇಳ ಪ್ರತ್ಯಕ್ಷ ಮಾಹಿತಿಗಳನ್ನು ನೀಡಿತು. ಬರಗಾಲದಲ್ಲಿ ಹಾಗೂ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲದೆ ಬೆಳೆಯುವ ಈ ಧಾನ್ಯಗಳನ್ನು ಉಪಯೋಗಿಸುವುದರಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ, ತೈರಾಯ್ಡ್ ಮೊದಲಾದ ಖಾಯಿಲೆಗಳೂ ಗುಣಮುಖವಾಗುತ್ತದೆ ಎನ್ನುವ ವಿಚಾರವನ್ನೂ ಈ ಕಾರ್ಯಕ್ರಮದ ಮೂಲಕವೇ ತಿಳಿಸಲಾಯಿತು. ಸಿರಿಧಾನ್ಯಗಳ ಬಗ್ಗೆ ಹೆಸರಿನಲ್ಲೇ ಕೇಳಿದ ದಕ್ಷಿಣಕನ್ನಡ ಜಿಲ್ಲೆಯ ಜನತೆಗೆ ಪುತ್ತೂರಿನಲ್ಲಾದ ಈ ಮೇಳ ಹೊಸ ಅನುಭವವನ್ನು ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
(ಪ್ರವೀಣ್ ಪುತ್ತೂರು)