Header Ads
Breaking News

ಬರಡು ನೆಲವಾಗಿದ್ದ ಸ್ಥಳ ಈಗ ಫಲವತ್ತಾದ ಕೃಷಿ ಭೂಮಿ : ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಅವರ ಒಡ್ಡೂರು ಫಾರ್ಮ್ ಹೌಸ್

ಒಂದು ಕಾಲದಲ್ಲಿ ಬರಡು ನೆಲವಾಗಿದ್ದ ಈ ಸ್ಥಳ ಈಗ ಫಲವತ್ತಾದ ಕೃಷಿ ಭೂಮಿ. ಇಲ್ಲಿ ಬಗೆಬಗೆಯ ಕೃಷಿಗಳು ಇದ್ದರೂ ಕೂಡ ಇದೀಗ ಬೆಳೆದು ನಿಂತಿರುವ ತರಕಾರಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ದೃಶ್ಯ ಕಂಡುಬಂದಿರುವುದು ಬಂಟ್ವಾಳದ ಶಾಸಕರಾಗಿರುವ ರಾಜೇಶ್ ನಾೈಕ್ ಉಳಿಪ್ಪಾಡಿ ಅವರು ಒಡ್ಡೂರು ಫಾರ್ಮ್ ಹೌಸ್‍ನಲ್ಲಿ.

ಬಂಟ್ವಾಳ: ಸೋರೆಕಾಯಿ, ಹೀರೆಕಾಯಿ, ಹಸಿರು ಮತ್ತು ಕೆಂಪು ಬಣ್ಣದ ಬೆಂಡೆಕಾಯಿ, ಬದನೆ, ಗುಳ್ಳ, ಪಡುವಳ ಕಾಯಿ, ಬಸಳೆ, ಕೆಂಪು ಬಸಳೆ, ಅರಿವೆ, ಚೀನಿ ಕಾಯಿ, ಟೊಮೆಟೋ, ಮೂಲಂಗಿ, ಪಾಲಕ್, ಮೆಂತೆಸೊಪ್ಪು … ಹೀಗೆ ಹಲವು ಬಗೆಯ ಸೊಪ್ಪು, ತರಕಾರಿಗಳು ನೋಡುಗರ ಗಮನ ಸೆಳೆಯುವುದು ಪ್ರಗತಿಪರ ಕೃಷಿಕ, ಬಂಟ್ವಾಳದ ಶಾಸಕರಾಗಿರುವ ರಾಜೇಶ್ ನಾೈಕ್ ಉಳಿಪ್ಪಾಡಿ ಅವರು ಒಡ್ಡೂರು ಫಾರ್ಮ್ ಹೌಸ್‍ನಲ್ಲಿ. ಒಂದು ಕಾಲದಲ್ಲಿ ಬರಡು ನೆಲವಾಗಿದ್ದ ಈ ಸ್ಥಳ ಈಗ ಫಲವತ್ತಾದ ಕೃಷಿ ಭೂಮಿ. ಇಲ್ಲಿ ಬಗೆಬಗೆಯ ಕೃಷಿಗಳು ಇದ್ದರೂ ಕೂಡ ಇದೀಗ ಬೆಳೆದು ನಿಂತಿರುವ ತರಕಾರಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇತ್ತೀಚೆಗೆ ಅವರ ಮನೆಯಲ್ಲಿ ನಡೆದ ಶತಚಂಡಿಕಾ ಯಾಗ ಹಾಗೂ ಧರ್ಮನೇಮೋತ್ಸವದ ಸಂದರ್ಭ ಮನೆಗೆ ಭೇಟಿ ನೀಡಿದವರೆಲ್ಲ ತರಕಾರಿ ತೋಟವನ್ನು ನೋಡಿ ಪುಳಕಿತರಾಗಿದ್ದಾರೆ.

ಮುರಮಣ್ಣಿನ ಬರಡು ನೆಲದಲ್ಲಿ ತರಹೇವಾರಿ ತರಕಾರಿಗಳನ್ನು ಬೆಳೆಯುವ ಮೂಲಕ ಶಾಸಕರು ಇತರ ರೈತರಿಗೆ ಮಾದರಿಯಾಗಿದ್ದಾರೆ. ಮನಸ್ಸಿದರೇ ಎಂತಹ ಜಮೀನಿನಲ್ಲೂ ಕೃಷಿ ಮಾಡಲು ಸಾಧ್ಯವಿದೆ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ. ಮನೆಗೆ ಪ್ರವೇಶ ಪಡೆಯುವ ಗೇಟ್ ಬಳಿಯಿಂದ ತರಕಾರಿಗಳು ಕಾಣಸಿಗಲಾರಂಭಿಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿರುವ ಬೇಲಿಯಲ್ಲಿ ಸೋರೆಕಾಯಿಯ ಬಳ್ಳಿಗಳು ಹಬ್ಬಿಕೊಂಡಿದ್ದು ಉದ್ದ ಹಾಗೂ ದುಂಡಗಿನ ಸೋರೆಕಾಯಿ ತರಕಾರಿ ಪ್ರಿಯರನ್ನು ಸೆಳೆಯುತ್ತದೆ. ಇನ್ನೊಂದೆಡೆ ಸಾಲು ಸಾಲು ಬದನೆ ಗಿಡಗಳು ಫಲಬಿಟ್ಟಿದ್ದು ಎರಡು ಬಗೆಯ ಬದನೆಗಳು ಗಮನ ಸೆಳೆಯುತ್ತವೆ. ಕೆಂಪು ಹಾಗೂ ಹಸಿರು ಬಣ್ಣದ ಉದ್ದನೆ ಬೆಂಡೆ, ಗಿಡಗಳ ತುಂಬಾ ತುಂಬಿಕೊಂಡಿದೆ. ಹೂ ಕುಂಡದಲ್ಲಿ ನೆಟ್ಟ ಗಿಡದಲ್ಲಿ ಟೊಮೆಟೋ ಹಣ್ಣುಗಳು ರಾರಾಜಿಸುತ್ತಿವೆ. ಬಸಳೆ ಹಾಗೂ ಅರಿವೆ ಸೊಪ್ಪಿನ ಗಿಡದ ಪ್ರತ್ಯೇಕ ಕೈ ತೋಟವೇ ಇದೆ. ಇನ್ನೂ ಈ ತರಕಾರಿಗಳ ಸುತ್ತ ಚೆಂಡು ಹೂವಿನ ಗಿಡಗಳನ್ನು ಬೆಳೆಸಲಾಗಿದ್ದು ಬಣ್ಣದ ಹೂಗಳು ತರಕಾರಿ ತೋಟದ ಅಂದ ಹೆಚ್ಚಿಸಿದೆ.

ರಾಜೇಶ್ ನಾೈಕ್ ಅವರ ತರಕಾರಿ ತೋಟದಲ್ಲಿ ಏಳು ಬಗೆಯ ಸೋರೆಕಾಯಿ ತಳಿಗಳಿವೆ. ಈ ಪೈಕಿ ಅಸ್ಸಾಂ ಸೋರೆಕಾಯಿ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಊರಿನ ಸೋರೆಕಾಯಿಗಳಿಗಿಂತ ನಾಲ್ಕು ಪಟ್ಟು ದೊಡ್ಡದಾಗಿರುವ ಈ ಸೋರೆಕಾಯಿ ತಲಾ 20 ಕೆಜಿಗಿಂತಲೂ ಅಧಿಕ ತೂಕ ಇದೆ. ಚಪ್ಪರದಲ್ಲಿ ಹರಡಿಕೊಂಡಿರುವ ಸಣ್ಣ ಬಳ್ಳಿಯಲ್ಲಿ ಇಷ್ಟು ದೊಡ್ಡ ತರಕಾರಿ ಮೂಡವುದು ಸಾಧ್ಯವೇ? ಎನ್ನುವ ಪ್ರಶ್ನೆ ಮೂಡಿಸುವಂತಿದೆ. ಒಂದೊಂದು ಸೋರೆಕಾಯಿ ಆಳೆತ್ತರಕ್ಕೆ ಬೆಳೆದಿದೆ.

ಅಡಿಕೆ, ತೆಂಗು ಮೊದಲಾದ ವಾಣಿಜ್ಯ ಬೆಳೆಗಳ ಜೊತೆಗೆ ಈ ಬಾರಿ ಅನಾನಸು ಕೂಡ ಬೆಳೆಸಲಾಗಿದೆ. 10 ಎಕರೆ ಪ್ರದೇಶದಲ್ಲಿ ಸುಮಾರು 50 ಸಾವಿರ ಅನನಾಸು ಗಿಡಗಳನ್ನು ಹಾಕಲಾಗಿದೆ. ಮಾವಿನ ತೋಟದ ಮಧ್ಯೆ ಜೇನು ಸಾಕಾಣಿಕೆಯನ್ನು ಆರಂಭಿಸಲಾಗಿದ್ದು 65 ಜೇನುಪೆಟ್ಟಿಗೆಗಳನ್ನು ಇಡಲಾಗಿದೆ. ಈ ಹಿಂದೆ ಹೈಡ್ರೋಪೋನಿಕ್ಸ್ ಮಾದರಿಯಲ್ಲಿ ಕ್ಯಾಪ್ಸಿಕಮ್ ಹಾಗೀ ಟೊಮೆಟೋ ಬೆಳೆಸವ ಮೂಲಕ ಹೊಸ ಪ್ರಯೋಗಳನ್ನು ಮಾಡಿರುವ ರಾಜೇಶ್ ನಾೈಕ್ ಅವರು ಇನ್ನಷ್ಟು ಹೊಸ ಹೊಸ ಕೃಷಿ ಪ್ರಯೋಗಳನ್ನು ಪರಿಚಯಿಸುವ ಉತ್ಸಾಹದಲ್ಲಿದ್ದಾರೆ. ದಿನಬಳಕೆಗೆ ಈ ತರಕಾರಿಗಳು ಉಪಯೋಗವಾಗುತ್ತದೆ. ಹೆಚ್ಚುವರಿ ತರಕಾರಿಗಳನ್ನು ಸ್ಥಳೀಯರು ಕೊಂಡು ಹೋಗುವುದಾಗಿ ಇಲ್ಲಿನ ಕೃಷಿ ಚಟುವಟಿಕೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಕೇಶವ ತಿಳಿಸುತ್ತಾರೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಬೆಳೆಸುವ ಮೂಲಂಗಿ, ಪಾಲಕ್, ಮೆಂತೆ ಸೊಪ್ಪುಗಳು ರಾಜೇಶ್ ನಾೈಕ್ ಅವರ ತರಕಾರಿ ತೋಟದಲ್ಲಿ ಹುಲುಸಾಗಿ ಬೆಳೆದಿದೆ. ಈ ಮೂಲಕ ಕೃಷಿ ಆಸಕ್ತರಿಗೆ ಶಾಸಕರ ಮನೆಯ ಕೈ ತೋಟವೇ ಪ್ರಯೋಗಶಾಲೆಯಂತಿದೆ.

Related posts

Leave a Reply

Your email address will not be published. Required fields are marked *