Header Ads
Breaking News

ಬರಿದಾಗಿಹೋದ ಶ್ರೀ ಕಾರೀಜೇಶ್ವರ ದೇವಸ್ಥಾನದ ಗಧಾತೀರ್ಥ

ಭೂ ಕೈಲಾಸ ಪ್ರಸಿದ್ಧ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಶ್ರೀ ಕಾರೀಜೇಶ್ವರ ದೇವಸ್ಥಾನದ ಗಧಾತೀರ್ಥ ಈಗ ಬರಿದಾಗಿಹೋಗಿದ. ಅತ್ಯಂತ ಪವಿತ್ರ ತೀರ್ಥ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದ ಗಧಾತೀರ್ಥದಲ್ಲಿ ಹೂಳು ತುಂಬಿಕೊಂಡು ಪಾಚಿ ಬೆಳೆದಿದೆ. ಇದೀಗ ಇದಕ್ಕೆ ಮರುಜೀವ ನೀಡುವ ಕೆಲಸ ಆರಂಭಗೊಂಡಿದೆ.

 ಭೂ ಕೈಲಾಸ ಪ್ರಸಿದ್ಧ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಶ್ರೀ ಕಾರೀಜೇಶ್ವರ ದೇವಸ್ಥಾನದ ಗದಾ ತೀರ್ಥದಲ್ಲಿ ಎಂತಹ ಬರಗಾಲ ಬಂದರೂ ನೀರು ಕಡಿಮೆಯಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಆದರೆ ಎಂದಿಗೂ ಬತ್ತದ ಈ ತೀರ್ಥವು ಈ ಬಾರಿ ಬಿ.ಸಿ.ರೋಡು ಪುಂಜಾಲಕಟ್ಟೆ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯಕ್ಕೆ ಟ್ಯಾಂಕರ್ ಮೂಲಕ ಕೆರೆಯ ನೀರನ್ನು ಸಾಗಿಸಿದ ಪರಿಣಾಮ ಕೆರೆ ಬರಿದಾದಂತಾಗಿದೆ. ಇದೀಗ ಕೆರೆಗೆ ಮತ್ತೆ ಮರುಜೀವ ಒದಗಿಸುವ ಕೆಲಸ ಆರಂಭಗೊಂಡಿದೆ.

ಗಧಾತೀರ್ಥದ ನೀರು ದೇವಸ್ಥಾನದ ಕಾರ್ಯಗಳಿಗೆ ಹೊರತು ಪಡಿಸಿ, ಕೇವಲ ಸ್ನಾನಕ್ಕೆ ಮಾತ್ರ ಉಪಯೋಗವಾಗುತ್ತಿದೆ. ಭಕ್ತಾಧಿಗಳು ವರ್ಷಾನುಗಟ್ಟಲೆ ಸ್ನಾನ ಮಾಡಿ ನೀರು ಕಲುಷಿತಗೊಂಡಿದೆ. ಕೆರೆಯಲ್ಲಿ ಹೂಳು ತುಂಬಿ ಪಾಚಿ ಬೆಳೆದಿದೆ. ಈ ಕಾರಣದಿಂದ ನೀರನ್ನು ಆರಿಸಿ ಕೆರೆಯನ್ನು ಶುದ್ಧೀಕರಿಸುವ ಕಾರ್ಯ ನಡೆಯುತ್ತಿದೆ. ಕೆರೆಯ ನೀರನ್ನು ಟ್ಯಾಂಕರ್ ಮೂಲಕ ಖಾಸಗಿಯವರು ಬಳಸಿಕೊಳ್ಳುವುದಕ್ಕೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಗಿದ್ದು, ನೀರಿನ ಸಾಗಾಟ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಟ್ಯಾಂಕರ್ ಮೂಲಕ ನೀರಿನ ಸಾಗಾಟವೂ ಆರಂಭಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಹಳ ವರ್ಷಗಳ ಹಿಂದೊಮ್ಮೆ ಕೆರೆಯ ನೀರನ್ನು ಖಾಲಿಮಾಡಲು ಹೊರಟಾಗ ತೆಗೆದಷ್ಟು ನೀರು ತುಂಬಿಕೊಂಡಿದ್ದುದರಿಂದ ಈ ಕಾರ್ಯವನ್ನು ಕೈ ಬಿಟ್ಟಿದ್ದರು. ಏಕೆಂದರೆ ಇದರ ಆಳವನ್ನು ಯಾರೂ ಬಲ್ಲವರಿಲ್ಲ ಎನ್ನುತ್ತಾರೆ. ಈ ಬಾರಿ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ನೀರು ತೆಗೆದು ಕೆರೆ ಸ್ವಚ್ಛ ಗೊಳಿಸಲು ಮುಂದಾಗಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Related posts

Leave a Reply

Your email address will not be published. Required fields are marked *