
ಬಸವರಾಜ್ ಯತ್ನಾಳ್ ಅವರಿಗೆ ಸಚಿವ ಸ್ಥಾನ ಬೇಕಾಗಿದೆ. ಅದಕ್ಕಾಗಿ ಈ ರೀತಿಯ ವರ್ತನೆ ತೋರುತ್ತಿದ್ದಾರೆ. ಅವರನ್ನು ಕರೆದು ಸಮಾಧಾನ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ಇಂಥ ಒತ್ತಡಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಯತ್ನಾಳ ನಾನು ಅಧ್ಯಕ್ಷನಾಗಿರುವಾಗಲೂ ಒದೇ ರೀತಿಯ ನಡವಳಿಕೆ ತೋರುತ್ತಿದ್ದಾರೆ.ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ತಾನೇ ಅವರನ್ನು ಉಚ್ಛಾಟನೆ ಮಾಡಿದ್ದೆ. ಇನ್ನು ಮುಂದೆ ಪಕ್ಷದ ವಿರುದ್ಧ ಮಾಧ್ಯಮದ ಮುಂದೆ ಮಾತಾಡಿದಲ್ಲಿ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ತಕ್ಕ ಕ್ರಮ ಕೈಗೊಳ್ಳುತ್ತಾರೆ. ಶಾಸಕರಾಗಿ ಜನರ ಕಾರ್ಯ ಮಾಡಲಿ. ವೈಯುಕ್ತಿಕವಾಗಿ ತನಗೆ ಯತ್ನಾಳ ವಿರೋಧಿಯಲ್ಲ. ಯತ್ನಾಳ ಈ ರೀತಿಯ ನಡವಳಿಕೆಯನ್ನು ತಕ್ಷಣವೇ ಬಿಡಬೇಕು. ಪಕ್ಷದ ನಾಯಕರ ವಿರುದ್ಧ ಅಸಮಾಧಾನವಿದ್ದರೆ ನೇರವಾಗಿ ಪಕ್ಷದ ಕೇಂದ್ರ ನಾಯಕರ ಗಮನಕ್ಕೆ ತನ್ನಿ. ರಾಜ್ಯದ ಕೆಲವು ನಾಯಕರು ಈ ರೀತಿ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಬೀದಿ ಬದಿಗಳಲ್ಲಿ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲಎಂದು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯ ಗಡಿತಂಟೆಗೆ ತೀವೃ ಆಕ್ಷೇಪ ವ್ಯಕ್ತಪಡಿಸಿದ ಡಿವಿಎಸ್ ಕರ್ನಾಟಕದ ನೆಲ-ಜಲ ಉಳಿಸುವ ಜವಾಬ್ದಾರಿ ರಾಜ್ಯ ಸರಕಾರದ್ದು. ತನ್ನ ಸರಕಾರ ಡೋಲಾಯಮಾನ ಸ್ಥಿತಿಯಲ್ಲಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿರುದ್ಧ ಕಾಂಗ್ರೇಸ್ ಅಸಮಾಧಾನ ಹೊಂದಿದೆ. ಉದ್ಭವ್ ಕುರ್ಚಿ ಉಳಿಯುವುದೇ ಗೊಂದಲದಲ್ಲಿದೆ ಎಂದು ಹೇಳಿದರು.