Header Ads
Header Ads
Breaking News

ಬಸ್ ಒಂದು ಕಡೆ, ಬಸ್ ನಿಲ್ದಾಣ ಒಂದು ಕಡೆ: ಅತಂತ್ರದ ಸ್ಥಿತಿಯಲ್ಲಿ ಉಪ್ಪಿನಂಗಡಿ ಬಸ್ ನಿಲ್ದಾಣ

ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಸರಕಾರದ್ದಾಗಿದೆ. ಆದರೆ ಈ ವಿಚಾರದಲ್ಲೂ ಆಡಳಿತದಲ್ಲಿರುವವರು ತಮ್ಮ ಲಾಭವನ್ನೇ ನೋಡಿದಲ್ಲಿ ಅಂಥ ಮೂಲಭೂತ ಸೌಲಭ್ಯಗಳು ಜನರಿಗೆ ಇದ್ದೂ, ಇಲ್ಲದಂತಾಗುವುದು ಸಾಮಾನ್ಯವೇ. ಇಂಥಹುದೇ ಒಂದು ವ್ಯವಸ್ಥೆ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿದ್ದು, ಇಲ್ಲಿನ ಪಂಚಾಯತ್ ಕಟ್ಟಿದ ಬಸ್ ನಿಲ್ದಾಣ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ. ಬಸ್ ಒಂದು ಕಡೆ, ಬಸ್ ನಿಲ್ದಾಣ ಒಂದು ಕಡೆಯಿದ್ದು, ಇದು ವ್ಯವಸ್ಥೆಯೋ ಅಥವಾ ಅವ್ಯವಸ್ಥೆಯೋ ಎನ್ನುವ ಅನುಮಾನವೂ ಕಾಡತೊಡಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಅತ್ಯಂತ ಸಂಪದ್ಭರಿತವಾದ ಗ್ರಾಮಪಂಚಾಯತ್ ನಲ್ಲಿ ಉಪ್ಪಿನಂಗಡಿ ಗ್ರಾಮಪಂಚಾಯತ್ ಕೂಡಾ ಒಂದು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಉಪ್ಪಿನಂಗಡಿ ಪ್ರದೇಶದ ಜನರಿಗೆ ಸಂಪರ್ಕ ಕಲ್ಪಿಸುವ ಬಸ್ ಗಳಿಗೆ ಸುಸಜ್ಜಿತವಾದ ಬಸ್ ನಿಲ್ದಾಣವನ್ನು ಮಾಡಲಾಗಿದೆ ಎಂದು ಉಪ್ಪಿನಂಗಡಿ ಗ್ರಾಮಪಂಚಾಯತ್ ಈಗಾಗಲೇ ಹೇಳಿಕೊಂಡಿದೆ. ಆದರೆ ಈ ಬಸ್ ನಿಲ್ದಾಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಲ್ಲಿ ಇದು ಬಸ್ ನಿಲ್ದಾಣವೋ ಅಥವಾ ಮಾರುಕಟ್ಟೆಯೋ ಎನ್ನುವ ಗೊಂದಲ ಮೂಡುತ್ತದೆ. ಬಸ್ ಗಾಗಿ ಕಾಯುವ ಪ್ರಯಾಣಿಕರಿಗೆ ಇಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಿಲ್ಲ. ಪ್ರಯಾಣಿಕರಿಗೆ ಬಸ್ ಗಳಿಗಾಗಿ ಕಾಯಲು ಕೇವಲ ಒಂದು ಭಾಗದಲ್ಲಿ ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಉಳಿದ ಮೂರೂ ಭಾಗದಲ್ಲಿ ಪ್ರಯಾಣಿಕರು ನಿಲ್ಲುವ ಸ್ಥಳದಲ್ಲಿ ಅಂಗಡಿಗಳನ್ನು ಮಾಡಲಾಗಿದೆ. ಉಪ್ಪಿನಂಗಡಿಯಿಂದ ನೆಲ್ಯಾಡಿ, ಧರ್ಮಸ್ಥಳ, ಬೆಳ್ತಂಗಡಿ, ಕೊಕ್ಕಡ ಸೇರಿದಂತೆ ಹಲವು ಕಡೆಗಳಿಗೆ ಬಸ್ ವ್ಯವಸ್ಥೆಯಿದ್ದು, ಈ ಬಸ್ ಗಳು ಒಂದು ಕಡೆ ನಿಂತರೆ, ಪ್ರಯಾಣಿಕರು ಇನ್ನೊಂದು ಕಡೆ ನಿಲ್ಲಬೇಕಾದಂತಹ ಸ್ಥಿತಿಯಲ್ಲಿ ಈ ನಿಲ್ದಾಣವಿದೆ. ಕೆಲವು ಭಾಗಗಳಿಗೆ ತೆರಳುವ ಪ್ರಯಾಣಿಕರಂತು ಅಂಗಡಿಗಳ ಮುಂದೆಯೇ ಬಸ್ ಗಳಿಗಾಗಿ ಕಾಯಬೇಕಾದ ಪರಿಸ್ಥಿತಿಯಿದ್ದು, ಬಸ್ ನಿಲ್ದಾಣದ ಹೆಸರಿನಲ್ಲಿ ವಾಣಿಜ್ಯ ಕಟ್ಟಡವನ್ನು ಕಟ್ಟಿ ಕೋಟ್ಯಾಂತರ ರೂಪಾಯಿ ಬಾಡಿಗೆ ಪಡೆಯುತ್ತಿರುವ ಸ್ಥಳೀಯ ಗ್ರಾಮಪಂಚಾಯತ್ ಗೆ ಪ್ರಯಾಣಿಕರಿಗೆ ಸರಿಯಾಗಿ ಕುಳಿತುಕೊಳ್ಳುವ ವ್ಯವಸ್ಥೆಯನ್ನೂ ಮಾಡಲಾಗದಂತಹ ದುಸ್ಥಿತಿ ಏಕೆ ಎನ್ನುವ ಪ್ರಶ್ನೆ ಇದೀಗ ಮೂಡಲಾರಂಭಿಸಿದೆ.

ಗ್ರಾಮ ಪಂಚಾಯತ್ ನಿಯಮಗಳನ್ನು ಮೀರಿ ಉಪ್ಪಿನಂಗಡಿ ಗ್ರಾಮಪಂಚಾಯತ್ ನಲ್ಲಿ ಕಟ್ಟಡಗಳಿಗೆ ಪರವಾನಗಿಯನ್ನು ನೀಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬರಲಾರಂಭಿಸಿದೆ. ಬಸ್ ನಿಲ್ದಾಣಕ್ಕಾಗಿರುವ ಪ್ರದೇಶದಲ್ಲಿ ಪ್ರಯಾಣಿಕರಿಗೆ ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಿದ ಬಳಿಕ ವಾಣಿಜ್ಯ ಉದ್ದೇಶಕ್ಕೆ ಬಳಸಬೇಕಾದ ಕಟ್ಟಡವನ್ನು ಇದೀಗ ಪೂರ್ಣವಾಗಿ ವಾಣಿಜ್ಯ ಉದ್ದೇಶಕ್ಕಾಗಿಯೇ ಮೀಸಲಿಟ್ಟಿರುವುದು ಗಮನಕ್ಕೆ ಬರುತ್ತಿದೆ. ಮಹಿಳೆಯರು, ಮಕ್ಕಳು ಬಿರು ಬಿಸಿಲಿನಲ್ಲೇ ಬಸ್ ಗಳಿಗಾಗಿ ಕಾಯಬೇಕಾದ ಅನಿವಾರ್ಯತೆ ಇಲ್ಲಿ ಸೃಷ್ಟಿಯಾಗಿದೆ. ಪ್ರಯಾಣಿಕರು ನಿಲ್ಲಬೇಕಾದ ಸ್ಥಳಗಳನ್ನು ಅಂಗಡಿಗಳು ಆಕ್ರಮಿಸಿಕೊಂಡಿದ್ದು, ಎಲ್ಲವೂ ಅನಧಿಕೃತವಾಗಿ ನಡೆಯುತ್ತಿದ್ದರೂ, ಉಪ್ಪಿನಂಗಡಿ ಗ್ರಾಮಪಂಚಾಯತ್ ನ ಅಧಿಕಾರಿಗಳು ಸೇರಿದಂತೆ ಆಡಳಿತ ವರ್ಗ ಇವೆಲ್ಲದ್ದಕ್ಕೂ ತಮ್ಮ ಮೌನ ಸಮ್ಮತಿಯನ್ನು ಸೂಚಿಸಿದೆ.

ಬಸ್ ನಿಲ್ದಾಣಕ್ಕಾಗಿರುವ ಪ್ರದೇಶದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಒದಗಿಸೋದು ನಿಯಮವಾಗಿದೆ. ಆದರೆ ಉಪ್ಪಿನಂಗಡಿಯಲ್ಲಿ ಮಾತ್ರ ಪ್ರಯಾಣಿಕರನ್ನು ಕಡೆಗಣಿಸಿ ವ್ಯಾಪಾರಕ್ಕೇ ಇಲ್ಲಿ ಆದ್ಯತೆ ನೀಡಿರುವುದು ಕಾನೂನಿಗೆ ಮಾಡಿದ ಅಣಕವೂ ಆಗಿದೆ.

Related posts

Leave a Reply