Header Ads
Header Ads
Breaking News

ಬಹರೈನ್ : ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ದ.ಕ. ಜಿಲ್ಲಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್

ಬಹರೈನ್ ದ್ವೀಪದಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದವರ ಒಕ್ಕೂಟವಾದ “ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸ್ಸೋಸಿಯೇಶನ್” ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಬೆಳ್ಳಿ ಹಬ್ಬದ ಆಚರಣೆಯನ್ನು ಬಹರೈನ್‍ನ ಸಲ್ಮಾನಿಯ ಪರಿಸರದಲ್ಲಿರುವ ಮರ್ಮರಿಸ್ ಸಭಾಂಗಣದಲ್ಲಿ ಇಂದು ಸಂಜೆ ಏಳು ಘಂಟೆಗೆ ಆಯೋಜಿಸಿದೆ.ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಯು .ಟಿ. ಖಾದರ್‍ರವರು ಸಮಾರಂಭದ ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಲಿದ್ದಾರೆ. ಮಾಜಿ ಅರಣ್ಯ ಸಚಿವ ರಮಾನಾಥ್ ರೈ ಯವರು ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಮಾಜಿ ಶಾಸಕರಾದ ಮೊಯಿದೀನ್ ಭಾವ ಹಾಗು ಅನೇಕ ಮುಸ್ಲಿಂ ಸಮುದಾಯದ ಸಾಧಕರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 1992ರಲ್ಲಿ ಸಮುದಾಯದ ಸದಸ್ಯರ ನೋವು, ನಲಿವುಗಳಿಗಾಗಿ ಸ್ಪಂದಿಸಲು ಅಸ್ತಿತ್ವಕ್ಕೆ ಬಂದಂತಹ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಕಳೆದ 25 ವರುಷಗಳಿಂದ ತಾಯ್ನಾಡಿನಲ್ಲಿ ನೆಲೆಸಿರುವ ಹಾಗು ದ್ವೀಪದಲ್ಲಿರುವ ಸಮುದಾಯದ ಜನರ ಕಣ್ಣೀರೊರೆಸುವ ಅನೇಕ ಜನಹಿತ ಕಾರ್ಯಗಳನ್ನು ಮಾಡುವುದರೊಂದಿಗೆ ಸಂಘಟನೆಯು ಸಾರ್ಥಕತೆಯನ್ನು ಕಂಡಿದೆ. ಆರ್ಥಿಕ ಸಂಕಷ್ಟದಲ್ಲಿರುವ ಸದಸ್ಯರಿಗೆ ಸುಲಭ ಕಂತುಗಳಲ್ಲಿ ಸಾಲ, ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ನೆರವು ಇವೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಈ ಸಂಘಟನೆಯು ಅನೇಕ ಕುಟುಂಬಗಳಿಗೆ ಬೆಳಕಾಗಿದೆ.ದ್ವೀಪದಲ್ಲಿ ನೆಲೆಸಿರುವ ಸಮುದಾಯದ ಜನರುಗಳನ್ನು ತನ್ನ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಂಡು ಹೊರಾಂಗಣ ಕ್ರೀಡಾಕೂಟ, ಇಫ್ತಾರ್ ಕೂಟ, ವಾರ್ಷಿಕೋತ್ಸವ ಮುಂತಾದವುಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಸಮುದಾಯದ ಎಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಅರಿತು, ಬೆರೆತು ಒಗ್ಗಟ್ಟಾಗಿ ಬಾಳುವಂತೆ ಮಾಡಿದೆ .

ಕಳೆದ 25 ವರುಶಗಳಿಂದ ಶ್ರೀ ಅಬ್ದುಲ್ ರಜಾಕ್ ಹೆಜಮಾಡಿ ಈ ಸಂಘಟನೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾ ಕಾರ್ಯನಿರ್ವಹಿಸುತ್ತಿರುವುದು ಈ ಸಂಘಟನೆಯ ವಿಶೇಷತೆ. ಖ್ಯಾತ ಉದ್ಯಮಿಯಾಗಿರುವ ಅಬ್ದುಲ್ ರಜಾಕ್ ರವರು ಉದ್ಯಮದ ಜೊತೆಗೆ ಸಂಘಟನೆಯನ್ನು ಕೂಡ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಾ ಸಮುದಾಯದ ಪ್ರೀತಿ, ಮನ್ನಣೆಗೆ ಪಾತ್ರರಾಗಿದ್ದಾರೆ. ಒಂದು ಸಂಘಟನೆಯ ಅಧ್ಯಕ್ಷರಾಗಿ ಒಬ್ಬರೇ 25 ವರುಷಗಳ ತನಕ ಮುನ್ನಡೆಸಿಕೊಂಡು ಹೋಗುವುದು ಹೇಗೆ ಸಾಧ್ಯ ಎಂದು ಅವರನ್ನು ಪ್ರಶ್ನಿಸಿದರೆ ಸಮುದಾಯದ ಸದಸ್ಯರ ,ತಾಯ್ನಾಡಿನಲ್ಲಿ ನಿವೃತ್ತಿಯಾಗಿ ನೆಲೆಸಿರುವ ಹಿರಿಯರ ಪ್ರೀತಿ,ವಿಶ್ವಾಸವೇ ಕಳೆದ 25 ವರುಷಗಳಿಂದ ತಮಗೆ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುವ ಶಕ್ತಿಯನ್ನು ನೀಡಿದೆ ಎಂದು ವಿನಮ್ರರಾಗಿ ನುಡಿಯುತ್ತಾರೆ.ಸಂಘಟನೆಯು ಅಧ್ಯಕ್ಷರಾದ ಅಬ್ದುಲ್ ರಜಾಕ್ ಹೆಜಮಾಡಿಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ಜರುಗಲಿದ್ದು ಕಾರ್ಯಕ್ರಮದಲ್ಲಿ ಸಮುದಾಯದ ನೂರಾರು ಸದಸ್ಯರು ಮಾತ್ರವಲ್ಲದೆ ಇಲ್ಲಿನ ಕನ್ನಡಿಗ ಹಾಗು ತುಳು ಸಮುದಾಯದ ಗಣ್ಯರುಗಳು ಪಾಲ್ಗೊಳ್ಳಲಿದ್ದಾರೆ. ಸಮುದಾಯದ ನೋವು, ನಲಿವುಗಳಿಗೆ ಸ್ಪಂದಿಸುತ್ತಾ ಸಂಘಟನೆಯೊಂದು ಹೊರ ದೇಶದ ಮಣ್ಣಿನಲ್ಲಿ ಯಶಸ್ವಿಯಾಗಿ ಸಾರ್ಥಕತೆಯ 25 ವರುಷಗಳನ್ನು ಪೆರೈಸಿರುವುದು ನಿಜವಾಗಿಯೂ ದೊಡ್ಡ ಸಾಧನೆಯೇ ಸರಿ. ಸಮುದಾಯವು ಇನ್ನಷ್ಟು ಯಶಸ್ಸನ್ನು ಕಾಣಲಿ, ನೊಂದವರ ಬಾಳಲ್ಲಿ ಇನ್ನಷ್ಟು ಬೆಳಕು ಮೂಡಲಿ ಎಂದು ಶುಭ ಹಾರೈಸೋಣ .

Related posts

Leave a Reply