Breaking News

ಬಾಂಗ್ಲಾದೇಶದಲ್ಲಿ ಮಳೆ ಅನಾಹುತ, 105 ಜನ ಸಾವು, ಹಲವರು ನಾಪತ್ತೆ

ಈಶಾನ್ಯ ಬಾಂಗ್ಲಾದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಭೂಕುಸಿತಕ್ಕೆ ೧೦೫ ಜನ ಮೃತಪಟ್ಟಿದ್ದಾರೆ. ಮಣ್ಣಿನಡಿ ಸಾಕಷ್ಟು ಜನರು ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.
ಭೂಕುಸಿತವಲ್ಲದೆ ವಿದ್ಯುತ್ ಸ್ಪರ್ಶ, ಗೋಡೆ ಕುಸಿತ ಮತ್ತು ನೀರಿನಲ್ಲಿ ಮುಳುಗಿ ಹಲವರು ಮೃತಪಟ್ಟಿದ್ದಾರೆ. ಭಾರತದ ಗಡಿಗೆ ಹೊಂದಿಕೊಂಡಿರುವ ಗುಡ್ಡಗಾಡು ಜಿಲ್ಲೆ ರಂಗಮಾಟಿಯಲ್ಲಿ ಅತಿ ಹೆಚ್ಚು ೫೮ ಜನ ಮೃತಪಟ್ಟಿದ್ದಾರೆ. ಭೂಕುಸಿತದಿಂದ ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ರಸ್ತೆ ಮೇಲೆ ಬಿದ್ದಿರುವ ಅಪಾರ ಪ್ರಮಾಣದ ಮಣ್ಣನ್ನು ತೆರವುಗೊಳಿಸಲು ಯೋಧರನ್ನು ನಿಯೋಜಿಸಲಾಗಿದೆ. ಇವರ ಜತೆ ಅಗ್ನಿಶಾಮಕ ದಳದ ಸಿಬ್ಬಂದಿಯೂ ಕೈಜೋಡಿಸಿದ್ದಾರೆ.
ದೂರವಾಣಿ ಮತ್ತು ರಸ್ತೆ ಸಂಪರ್ಕ ಸಹ ಸ್ಥಗಿತಗೊಂಡಿದ್ದು, ಕುಗ್ರಾಮಗಳಿಗೆ ರಕ್ಷಣಾ ತಂಡ ತೆರಳಲು ಹರಸಾಹಸ ಪಡುವಂತಾಗಿದೆ. ಮಳೆ ನಿಂತ ತಕ್ಷಣವೇ ತೊಂದರೆಗೊಳಗಾದ ಪ್ರದೇಶಗಳಿಗೆ ತೆರಳಲು ಸಾಧ್ಯ. ಆದರೂ ಪ್ರಯತ್ನ ನಡೆಸಲಾಗುತ್ತಿದೆ ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ಮುಖ್ಯಸ್ಥ ರಿಯಾಜ್ ಅಹಮದ್ ತಿಳಿಸಿದ್ದಾರೆ. ಬಂದರ್ಬನ್ ಮತ್ತು ಚಿತ್ತಗಾಂಗ್ ಜಿಲ್ಲೆಗಳೂ ಮಳೆಯಿಂದ ತತ್ತರಿಸಿವೆ.

Related posts

Leave a Reply