Header Ads
Header Ads
Breaking News

ಬಾಡಿಗೆಗೆ ಜಮೀನು ಪಡೆದು ಭರಪೂರ ಕೃಷಿ ಮಾಡಿದ ಕೃಷಿಕ

ಬಂಟ್ವಾಳ: ಕೃಷಿ ಮಾಡಬೇಕೆಂದರೆ ಸ್ವಂತ ಜಮೀನು ಇರ ಬೇಕೆಂದೇನಿಲ್ಲ, ಬಾಡಿಗೆಗೆ ಜಮೀನು ಪಡೆದು ಭರಪೂರ ಕೃಷಿ ಮಾಡಿ ಯಶಸ್ಸು ಗಳಿಸಬಹುದು. ಇದಕ್ಕೆ ಉದಾಹರಣೆ ಬಂಟ್ವಾಳದ ನಾವೂರು ಗ್ರಾಮದ ಕನಪಾದೆಯ ಕೃಷಿಕ ಎಡ್ವಿನ್ ನವೀನ್ ಡಿಸೋಜಾ ಅವರು. ಸುಮಾರು ಏಳು ಎಕರೆ ಜಮೀನನ್ನು ಬಾಡಿಗೆಗೆ ಪಡೆದು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ತರಕಾರಿ ಕೃಷಿ ಮಾಡಿ ಯಶಸ್ಸು ಕಾಣುತ್ತಿದ್ದಾರೆ.
ಎಡ್ವಿನ್ ಡಿಸೋಜಾ ಅವರಿಗೆ ತರಕಾರಿ ಬೆಳೆಸುವುದರಲ್ಲಿ ವಿಪರೀತ ಆಸಕ್ತಿ. ತನ್ನ ಮನೆಯ ಸಮೀಪ ಕನಪಾದೆ ಎಂಬಲ್ಲಿ ಈ ಹಿಂದೆ 10 ಎಕರೆ ಜಮೀನನ್ನು ಬಾಡಿಗೆ ಪಡೆದು ತರಕಾರಿ ಬೆಳೆಸುತ್ತಿದ್ದರು. ಇತ್ತೀಚಿನ ಎರಡು ವರ್ಷದಿಂದ ನಾವೂರು ಬೀದಿಯ ಫೆಲಿಕ್ಸ್ ಫಾರ್ಮನ್ನು ಬಾಡಿಗೆಗೆ ಪಡೆದು ಅದರಲ್ಲಿ ತರಕಾರಿ ಬೆಳೆಸುತ್ತಿದ್ದಾರೆ. ಸುರಿಯುವ ಮಳೆಯೇ ಇರಲಿ, ಸುಡವ ಬಿಸಿಲೇ ಇರಲಿ ಇವರ ತೋಟದಲ್ಲಿ ತರಕಾರಿ ಸಮೃದ್ದವಾಗಿರುತ್ತದೆ.

ಫೆಲಿಕ್ಸ್ ಫಾರ್ಮನ್ನು ಲೀಝ್‍ಗೆ ಪಡೆದುಕೊಂಡಿರುವ ಎಡ್ವಿನ್ ಅವರು ದೊಡ್ಡ ಪ್ರಮಾಣದಲ್ಲಿ ತರಕಾರಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಹೀರೆಕಾಯಿ, ಪಡುವಲ ಕಾಯಿ, ಚೀನಿಕಾಯಿಯನ್ನು ಬೆಳೆಯುವ ಇವರು ಬೇಸಿಗೆಯಲ್ಲಿ ಸೋರೆಕಾಯಿ, ಬದನೆ, ತೊಂಡೆಕಾಯಿಯನ್ನು ಬೆಳೆಸುತ್ತಾರೆ. ಇದೀಗ ಎರಡು ಎಕರೆ ಜಾಗದಲ್ಲಿ ಸೋರೆಕಾಯಿಯನ್ನು ಬೆಳೆಸಿದ್ದು ಗಿಡಗಳು ಬೆಳವಣಿಗೆಯ ಹಂತದಲ್ಲಿದೆ. ಮುಂದಿನ ಒಂದು ತಿಂಗಳಿನಲ್ಲಿ ಗಿಡಗಳು ಫಲ ನೀಡಲಿದೆ. ಒಟ್ಟು 77 ಸಾಲುಗಳಲ್ಲಿ 30 ಗಿಡಗಳಂತೆ ಗಿಡಗಳನ್ನು ಬೆಳೆಸಲಾಗುತ್ತಿದೆ. 5 ಅಡಿ ಅಂತರಕ್ಕೆ ಒಂದು ಗಿಡದಂತೆ 9 ಅಡಿ ಅಂತರಕ್ಕೆ ಒಂದೊಂದು ಸಾಲುಗಳನ್ನು ನಿರ್ಮಿಸಲಾಗಿದೆ. ಬಳ್ಳಿಗಳು ಹಬ್ಬಲು ಎರಡೂ ಎಕರೆ ಜಮೀನಿಗೂ ಚಪ್ಪರಗಳನ್ನು ನಿರ್ಮಿಸಲಾಗಿದ್ದು ಅತ್ಯಂತ ವ್ಯವಸ್ಥಿತವಾಗಿ ತರಕಾರಿ ಬೆಳೆಯಲಾಗುತ್ತಿದೆ.

ಈ ಹಿಂದೆ ಪೊದೆಗಳಿದ್ದ ಈ ಸ್ಥಳದಲ್ಲಿ ತರಹೇವಾರಿ ತರಕಾರಿಗಳು ಬೆಳೆದು ಕೃಷಿ ಯೋಗ್ಯ ಭೂಮಿಯಾಗಿ ಮಾರ್ಪಟ್ಟಿದೆ. ಇದರ ಜೊತೆಗೆ ಚೀನಿ ಕಾಯಿಯನ್ನು ಬೆಳೆದಿದ್ದಾರೆ. ಕಳೆದ ವರ್ಷ 2 ಸಾವಿರ ಗೋಣಿ ಬದನೆ ಬೆಳೆದಿದ್ದರು. ಹೊರ ಭಾಗದಲ್ಲಿ ಬಾಳೆಯನ್ನು ಪರ್ಯಾಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.

ತರಕಾರಿಗಳಿಗೆ ಸಾವಯವ ಗೊಬ್ಬರಗಳನ್ನೇ ಬಳಸುತ್ತಿದ್ದಾರೆ. ಹಟ್ಟಿಗೊಬ್ಬರ, ಕೋಳಿ ಗೊಬ್ಬರ ಜೊತೆಗೆ ಸೆಗಣಿ ಹಾಗೂ ನೆಲಕಡಲೆ ಹಿಂಡಿಯ ಮಿಶ್ರಣವನ್ನು ಹಾಕುವುದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ ಜೊತೆಗೆ ಉತ್ತಮ ಇಳುವರಿ ನೀಡುತ್ತವೆ ಎನ್ನುತ್ತಾರೆ ಎಡ್ವಿನ್.
ಎಡ್ವಿನ್ ಡಿಸೋಜಾ ಅವರು ಬೆಳೆಯುವ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಎರಡು ಎಕರೆಯಲ್ಲಿ ಬೆಳೆದ ಅಷ್ಟೂ ತರಕಾರಿಯನ್ನು ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಅಲ್ಲಿ ಎಡ್ವಿನ್ ಅವರ ತರಕಾರಿಯನ್ನು ಗ್ರಾಹಕರು ಕೇಳಿ ಪಡೆದುಕೊಳ್ಳುವಷ್ಟು ಬೇಡಿಕೆ ಇದೆ.

Related posts

Leave a Reply

Your email address will not be published. Required fields are marked *