Header Ads
Header Ads
Breaking News

ಬಿಎಸ್‌ಪಿ- ಜೆಡಿಎಸ್ ಮೈತ್ರಿಕೂಟ ಬೆಂಬಲಿಸಲು ಬಿಎಸ್‌ಪಿ ಮುಖಂಡರ ಮನವಿ

ಸುಳ್ಯ: 2018 ರ ವಿಧಾನಸಭಾ ಚುನಾವಣೆಯ ಸುಳ್ಯ ಮೀಸಲು ಕ್ಷೇತ್ರದಲ್ಲಿ ಬಿಎಸ್‌ಪಿ, ಜೆಡಿಎಸ್ ಮೈತ್ರಿಕೂಟ ಸ್ಪರ್ಧಿಸಲಿದ್ದು, ಬಿಎಸ್‌ಪಿ ಅಭ್ಯರ್ಥಿ ಇಲ್ಲಿ ಕಣಕ್ಕಿಳಿಯಲಿದ್ದಾರೆ. ಸುಳ್ಯದ ಸರ್ವಜನತೆ ನಮ್ಮನ್ನು ಬೆಂಬಲಿಸಬೇಕು ಎಂದು ಬಿಎಸ್‌ಪಿ ಜಿಲ್ಲಾ ಮುಖಂಡ ಹಾಗೂ ಸಂಭಾವ್ಯ ಅಭ್ಯರ್ಥಿ ರಘು ಧರ್ಮಸೇನ ಹೇಳಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ಸುಳ್ಯ ವಿಧಾನಸಭಾ ಕ್ಷೇತ್ರ ತುಂಬಾ ಹಿಂದುಳಿದಿದೆ. ಮೂಲಭೂತ ಸೌಲಭ್ಯಗಳ ಕೊರತೆ, ಶೋಷಿತರಿಗೆ ಕೃಷಿ ಭೂಮಿಯ ಹಂಚಿಕೆಯಾಗದಿರುವುದು, ವಿದ್ಯುತ್ ಪೂರೈಕೆಯಲ್ಲಿನ ಕೊರತೆ, ನಿರುದ್ಯೋಗ, ಸಣ್ಣ ಕೈಗಾರಿಕೆಗಳ ಸ್ಥಾಪನೆಯಾಗದಿರುವುದು ಈ ಕ್ಷೇತ್ರದ ದುರಂತ. ಈ ಕ್ಷೇತ್ರ ದಲಿತರಿಗೆ ಮೀಸಲಾಗಿದೆ. ಇಲ್ಲಿ ಗೆದ್ದವರು ಇಡೀ ಜಿಲ್ಲೆಯ ದಲಿತರ ಧ್ವನಿಯಾಗಬೇಕಾಗಿತ್ತು. ಆದರೆ ಬೇರೆ ಕ್ಷೇತ್ರ ಬಿಡಿ, ಈ ಕ್ಷೇತ್ರದ ದಲಿತರ ಅಭಿವೃದ್ಧಿಗೂ ಇಲ್ಲಿನ ಶಾಸಕರು ಯಾವುದೇ ಪ್ರಯತ್ನ ಮಾಡಿಲ್ಲ. ಗುಡಿಸಲು ಮುಕ್ತ ರಾಜ್ಯ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದರೂ ಸುಳ್ಯದಲ್ಲಿನ ಶೋಷಿತ ಜನರು ಇನ್ನು ಕೂಡಾ ಗುಡಿಸಲುಗಳಲ್ಲಿಯೇ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ಶಾಸಕರ ವೈಫಲ್ಯವೇ ಕಾರಣ. ಮುಂದಿನ ದಿನಗಳಲ್ಲಿ ಸುಳ್ಯ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ, ಆ ಮೂಲಕ ಕ್ಷೇತ್ರ ಗೆಲ್ಲುವುದಾಗಿ ಹೇಳಿದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು ಮಾತನಾಡಿ, ರಾಜ್ಯಮಟ್ಟದಲ್ಲಿ ನಡೆದ ಬಿಎಸ್‌ಪಿ ಜೆಡಿಎಸ್ ಮಾತುಕತೆಯಂತೆ ರಾಜ್ಯದಲ್ಲಿ ೨೦ ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿದೆ. ಈ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟವು ಗೆಲುವು ಸಾಧಿಸಿ ಎಚ್.ಡಿ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರಮೇಶ್ ಮುಂಡೋಡಿ, ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಗೋಪಾಲ ಎ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವರದಿ: ಪದ್ಮನಾಭ ಸುಳ್ಯ